ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಪಾಂಡವಪುರ. ಸೆ.10. ಕೇಂದ್ರ ಸರ್ಕಾರವು ಕಳೆದ ಹತ್ತಾರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಗಳ ಮಾರಾಟ ದರದಲ್ಲ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯಕರ್ತರು ಪಾಂಡವಪುರ ಟೌನ್‍ನ ಮಂಡ್ಯ ವೃತ್ತದಲ್ಲಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
‘ಅಚ್ಭೆ ದಿನ’ ದ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರವು ಇಂದು ಎಲ್ಲ ರಂಗಗಳಲ್ಲೂ ವಿಫಲಗೊಂಡಿದೆ. ಪೆಟ್ರೋಲ್ ,ಅಡುಗೆ ಅನಿಲ, ಡಿಸೇಲ್ ಬೆಲೆಗಳು ಗಗನಕ್ಕೇರಿವೆ. ಡಾಲರ್ ಬೆಲೆ ರೂ.72 ನ್ನು ದಾಟಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಎಂಬುದು ಮರೀಚಿಕೆಯಾಗಿದೆ. ನೋಟು ಅಮಾನ್ಯೀಕರಣ ಕೋಟ್ಯಾಂತರ ಪ್ರಜೆಗಳಿಗೆ ಹಿಂಸೆ ನೀಡಿತೇ ವಿನ: ಕಪ್ಪು ಹಣ, ಭ್ರಷ್ಟಾಚಾರ ತಡೆಯಲು ವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿದ್ದಾರೆ. ಇಂತಹ ನೈಜ ವಿಷಯಗಳಿಂದ ಜನರನ್ನು ದಿಕ್ಕು ತಪ್ಪಿಸಲು ಕೋಮುವಾದ, ಗೋಹತ್ಯೆ, ಒಳಸಂಚು , ದೇಶದ್ರೋಹಗಳಂತಹ ವಿಷಯಗಳನ್ನು ಹರಿಯಬಿಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ್ ಅಧ್ಯಕ್ಷ ಗೋವಿಂದ ರಾಜು, ಜಿಲ್ಲಾ ಮಹಿಳಾ ಅಧ್ಯಕ್ಷೆ ಭಾರತಿ ಕುಮಾರ್, ತಾಲೂಕ್ ಮಹಿಳಾ ಅಧ್ಯಕ್ಷೆ ಸೌಭಾಗ್ಯ , ಕಾರ್ಯಕರ್ತರಾದ ಯೋಗೇಶ್ , ಅಂಕೇಗೌಡ , ರಘು, ಸತೀಷ್, ರಾಮಚಂದ್ರ ಪಾಲ್ಗೊಂಡಿದ್ದರು.
ಮುನ್ನೆಚ್ಚರಿಕೆ ದೃಷ್ಠಿಯಿಂದ ಪಾಂಡವಪುರ ಟೌನ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿ ವರ್ಗದವರು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್‍ನಲ್ಲಿ ತೊಡಗಿದ್ದರು.

Leave a Comment