ತೈಲ ಬೆಲೆ ಏರಿಕೆ ಖಂಡಿಸಿ ಎಡಪಕ್ಷಗಳ ಪ್ರತಿಭಟನೆ

ರಾಯಚೂರು.ಸೆ.10- ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇತರೆ ಜನ ವಿರೋಧಿ ಆರ್ಥಿಕ ಕ್ರಮಗಳ ವಿರುದ್ಧ ಎಡಪಕ್ಷಗಳು ಬೃಹತ್ ಪ್ರತಿಭಟನೆ ನಡೆಸಿದರು.
ಕಮ್ಯುನೀಷ್ಟ್ ಪಾರ್ಟಿ ಆಫ್ ಇಂಡಿಯಾ, ಸೋಷಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ ನೇತೃತ್ವದ ಎಡಪಕ್ಷಗಳು ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಎತ್ತಿನ ಬಂಡಿ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ದೇಶದ ಜನರ ಮೇಲೆ ಭಾರಿ ಆರ್ಥಿಕ ಹೊರೆ ಹೇರುತ್ತಿರುವುದು ಖಂಡನೀಯ.
ತೈಲ ಬೆಲೆ ದಿನನಿತ್ಯ ಏರಿಕೆಯಾಗುತ್ತಿರುವುದರಿಂದ ಕೋಟ್ಯಾಂತರ ಜನರ ಬದುಕು ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ. ಕೃಷಿ ಮತ್ತಷ್ಟು ದುಬಾರಿಯಾಗಲಿದೆ. ಬೆಲೆ ಏರಿಕೆಯು ವಿನಾಶಕಾರಿ ಹಣ ದುಬ್ಬರಕ್ಕೆ ಕಾರಣವಾಗಲಿದೆ. ಮೋದಿ ಸರ್ಕಾರವು ನೀಡಿರುವ ಭರವಸೆಯಂತೆ ಬೆಂಬಲ ಬೆಲೆ ಹಾಗೂ ಸಾಲಮನ್ನಾ ಬೇಡಿಕೆ ಈಡೇರಿಸುವಲ್ಲಿ ನಿರ್ಲಕ್ಷಧೋರಣೆ ಅನುಸರಿಸುತ್ತಿದೆ. ಕಳೆದ 4 ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳ 4 ಲಕ್ಷ ಕೋಟಿ ಸಾಲ ಉದಾರವಾಗಿ ಮನ್ನಾ ಮಾಡಲಾಗಿದೆ.
ಕಾರ್ಪೊರೇಟ್ ಮನೆಗಳ ಸಾಲ ಹಾಗೂ ಈಗಾಗಲೇ ಸುಸ್ತಿ ಸಾಲದಿಂದ ಬ್ಯಾಂಕ್‌ಗಳು ದಿವಾಳಿಯಾಗಿವೆ. ಬಂಡವಾಳಶಾಹಿ ವ್ಯವಸ್ಥೆ ಪ್ರತೀಕವಾಗಿ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಾದ ಹಗರಣದ ಬಗ್ಗೆ ಇದುವರೆಗೂ ಯಾವುದೇ ತನಿಖೆ ನಡೆಸದಿರುವುದು ಹಲವು ಅನುಮಾನಗಳು ವ್ಯಕ್ತಗೊಂಡಿವೆ. ಕೂಡಲೇ ಸರ್ಕಾರವು ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿತಗೊಳಿಸಬೇಕೆಂದು ಆಗ್ರಹಿಸಿದರು.
ಡಾ.ಚಂದ್ರಗಿರೀಶ್, ಕೆ.ಜಿ.ವೀರೇಶ್, ಸುನೀತ್ ಕುಮಾರ್, ಸುಲೋಚನಾ, ಎನ್.ಎಸ್.ವೀರೇಶ್, ಬಿ.ಆರ್.ಅಪರ್ಣಾ, ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಸತ್ಯಪ್ಪ, ಜಮಲಮ್ಮ, ಮಹೇಶ್, ಜಿಲಾನಿ, ಗುರುರಾಜ ದೇಸಾಯಿ, ಯಂಕಪ್ಪ, ಚನ್ನಬಸವ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment