‘ತೈಲಬೆಲೆ ಏರಿಕೆಯಿಂದ ಆರ್ಥಿಕತೆ ಬುಡಮೇಲು’

ಮೋದಿ ರಾಜೀನಾಮೆಗೆ ವಿಶ್ವನಾಥ್ ಒತ್ತಾಯ
ಮೈಸೂರು, ಸೆ. 10. ತೈಲಬೆಲೆ ಏರಿಕೆ ಖಂಡಿಸಿ ದೇಶದಾದ್ಯಂತ ಭಾರತ್ ಬಂದ್‍ಗೆ ಕರೆನೀಡಲಾಗಿದ್ದು ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನ ಗಾಂಧಿ ವೃತ್ತದ ಬಳಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತೈಲಬೆಲೆ ಏರಿಕೆಯಿಂದ ದೇಶದ ಆರ್ಥಿಕತೆಯೇ ಬುಡಮೇಲು ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದು ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಒಂದು ಸಾಕ್ಷಿ. ಕೇಂದ್ರ ಸರ್ಕಾರ ಪ್ರತಿ ಬಾರಿ ಗೋರಕ್ಷಕರು ಎಂದು ಹೇಳಿಕೆ ನೀಡುತ್ತಿದೆ. ಆದರೇ ಗುಜರಾತಿನ ವ್ಯಾಪಾರಿ ವರ್ಗ ಹೆಚ್ಚಿನ ಪ್ರಮಾಣದಲ್ಲಿ ಗೋ ಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುತ್ತಿದೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ದೇಶದ ಆರ್ಥಿಕತೆ ಬುಡಮೇಲು ಆಗುತ್ತಿದೆ. ಕೆಲವೇ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ಆಗಲಿದೆ. ಕೆಲವು ದಿನಗಳ ಹಿಂದೆ ಶೋಭಾ ಕರಂದ್ಲಾಜೆ , ಸದಾನಂದಗೌಡ ಅವರು ಬೀದಿಗಿಳಿದು ಗ್ಯಾಸ್ ಸಿಲಿಂಡರ್ ತಲೆಮೇಲೆ ಒತ್ತು ಪ್ರತಿಭಟನೆ ಮಾಡಿದ್ದರು. ಈಗ ಅವರೆಲ್ಲಾ ಎಲ್ಲಿ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖಂಡ ಈಶ್ವರಪ್ಪ ಸರ್ಕಾರ ಬಿದ್ದು ಹೋಗುತ್ತೆ ಅಂತ ಪ್ರತಿದಿನ ಬಾಯಿ ಬಾಯಿ ಹೊಡೆದು ಕೊಳ್ಳುತ್ತಿದ್ದಾರೆ. ಆದರೆ ಈಗ ಅವರೆಲ್ಲಾ ಯಾವ ವೈಶಂಪಾಯನ ಸರೋವರದಲ್ಲಿ ಅವಿತಿದ್ದಾರೆ ಎಂದು ಹರಿಹಾಯ್ದ ಹೆಚ್.ವಿಶ್ವನಾಥ್, ಸಾವಿರಾರೂ ಕೋಟಿಗಳನ್ನು ಲೂಟಿ ಹೊಡೆದು ಬೇರೆ ದೇಶಗಳಿಗೆ ಓಡಿಹೋದವರು ಬಿಜೆಪಿಯವರು. ಮೋದಿಯವರು ವಿದೇಶಗಳ ಪ್ರವಾಸ ಮಾಡ್ತರಲ್ಲ. ಓಡಿ ಹೋಗಿರುವ ಕಳ್ಳರನ್ನು ಕರೆತರಲಿ ನೋಡೊಣ ಎಂದು ಸವಾಲು ಹಾಕಿದರು.
ಮೋದಿಯವರಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲಾ. ಇವರನ್ನ ಒದ್ದು ಓಡಿಸಲು ಜನರು ಸಿದ್ದ ರಾಗಿದ್ದಾರೆ. ಬಿಜೆಪಿ ಕೇಂದ್ರ ಸರ್ಕಾರದ ವಿರುದ್ದ ದಂಗೆ ಏಳಲು ಜನ ನಿರ್ಧರಿಸಿದ್ದಾರೆ. ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿ ವಿಫಲವಾಗಿರುವ ಸರ್ಕಾರವಾಗಿದೆ. ಎಲ್ಲಾ ರಂಗಗಳಲ್ಲೂ ಸೋತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೊದಲು ರಾಜೀನಾಮೆ ನೀಡಿ ಹೊರನಡೆಯಲಿ ಎಂದು ಆಗ್ರಹಿಸಿದರು.

Leave a Comment