ತೆಲಂಗಾಣ, ರಾಜಸ್ತಾನ ವಿಧಾನಸಭೆಗೆ ಚುರುಕಿನ ಮತದಾನ

ನವದೆಹಲಿ, ಡಿ. ೭- ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಭಾಗವಾಗಿರುವ ರಾಜಸ್ತಾನ ಮತ್ತು ತೆಲಂಗಾಣ ವಿಧಾನಸಭೆಗೆ ಇಂದು ಚುರುಕಿನ ಮತದಾನ ನಡೆಯುತ್ತಿದ್ದು, ಎರಡೂ ರಾಜ್ಯಗಳಲ್ಲಿ ಮಧ್ಯಾಹ್ನದವರೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಒಟ್ಟಾರೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ರಾಜಸ್ತಾನ ವಿಧಾನ ಸಭೆಯ 200 ಕ್ಷೇತ್ರಗಳಿಗೆ ಹಾಗೂ ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಅಭೂತಪೂರ್ವ ಬಂದೋಬಸ್ತ್ ಕೈಗೊಂಡಿದೆ.

ರಾಜಸ್ತಾನದಲ್ಲಿ ಮುಖ್ಯಮಂತ್ರಿ ವಸುಂಧರರಾಜೆ, ರಾಜಸ್ತಾನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಒಟ್ಟು 2,274 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಬೆಳಿಗ್ಗೆಯಿಂದಲೇ ಕೊರೆಯುವ ಚಳಿಯನ್ನು ಲೆಕ್ಕಿಸದೆ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ ದೃಶ್ಯ ಕಂಡು ಬಂದಿತು.

ರಾಜಸ್ತಾನದಲ್ಲಿ ಆಡಳಿತ ವಿರೋಧಿ ಅಲೆ ಕಂಡು ಬಂದಿದ್ದು, ಮತ್ತೆ ಬಿಜೆಪಿ ಅಧಿಕಾರ ಗದ್ದುಗೆ ಏರಲು ತೀವ್ರ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಅಬ್ಬರದ ಪ್ರಚಾರ ನಡೆಸಿ ಮತದಾರರ ಮನಗೆಲ್ಲಲು ಪ್ರಯತ್ನ ನಡೆಸಿದ್ದಾರೆ.

ಅದೇ ರೀತಿ ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ರಾಜಸ್ತಾನದಲ್ಲಿ ಅಬ್ಬರದ ಪ್ರಚಾರ ನಡೆಸಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರುವ ಹುಮ್ಮಸ್ಸಿನಲ್ಲಿದ್ದಾರೆ.

ಮತ್ತೊಂದೆಡೆ ತೆಲಂಗಾಣ ವಿಧಾನಸಭೆಗೂ ಬಿರುಸಿನ ಮತದಾನ ಪ್ರಗತಿಯಲ್ಲಿದ್ದು, ಮಧ್ಯಾಹ್ನದವರೆಗೂ ಯಾವುದೇ ಅಹಿತಕರ ಘಟನೆ ನ‌ಡೆದಿಲ್ಲ. ಶಾಂತಿಯುತ ಮತದಾನಕ್ಕಾಗಿ ಹಾಗೂ ನಕ್ಸಲ್ ಬಾದಿತ ಜಿಲ್ಲೆಗಳಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ.

ಮೆಗಾ ಸ್ಟಾರ್ ಚಿರಂಜೀವಿ, ಹೆಸರಾಂತ ನಟ ನಾಗಾರ್ಜುನ, ಬಾಹುಬಲಿ ನಿರ್ದೇಶಕ ರಾಜಮೌಳಿ ಸೇರಿದಂತೆ ಗಣ್ಯರು ತಮ್ಮ ಹಕ್ಕನ್ನು ಚಲಾಯಿಸಿದರು.

ಮತದಾರರು ಗುರುತಿನ ಚೀಟಿಗಳನ್ನು ಕೈಯಲ್ಲಿ ಹಿಡಿದು ಅತ್ಯಂತ ಉತ್ಸಾಹದಿಂದ ಉದ್ದನೆಯ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಅದರಲ್ಲೂ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ಪರಸ್ಪರ ಸಂತಸ ವಿನಿಮಯ ಮಾಡಿಕೊಂಡ ದೃಶ್ಯ ಕಂಡು ಬಂದಿತು.

ಅವಧಿಗೆ ಮುನ್ನವೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ವಿಧಾನಸಭೆ ವಿಸರ್ಜಿಸಿ ಜನಾದೇಶ ಪಡೆಯಲು ನಿರ್ಧರಿಸಿದ್ದರು. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ಹೊಂದಿದ್ದಾರೆ.

ಒಟ್ಟು 1821 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದು, 135 ಮಹಿಳೆಯರು ಸೇರಿದ್ದಾರೆ. ಈ ಎಲ್ಲ ನಾಯಕರ ಹಣೆಬರಹವನ್ನು ಮತದಾರ ನಿರ್ಧರಿಸಲಿದ್ದಾನೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸ್ ಘಡ, ಮಿಜೋರಾಂ ವಿಧಾನಸಭೆಗಳಿಗೆ ಈಗಾಗಲೇ ಚುನಾವಣಾ ಪ್ರಕ್ರಿಯೆ ಅಂತ್ಯಗೊಂಡಿದೆ. ಈ ತಿಂಗಳ 11 ರಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಯಾರಿಗೆ ಸಿಹಿ, ಯಾರಿಗೆ ಕಹಿ ಎಂಬುದು ತಿಳಿಯಲಿದೆ.

Leave a Comment