ತೆಲಂಗಾಣದಲ್ಲಿ ಸಾರಿಗೆ ನೌಕರರ ಪ್ರತಿಭಟನೆ -ಸರ್ಕಾರಕ್ಕೆ ಎಚ್ಚರಿಕೆ

 ಸಚಿವ-ಶಾಸಕರ ಮನೆಗೆ ಮುತ್ತಿಗೆ ಹಾಕಿ ನೌಕರರ ಆಕ್ರೋಶ

ಹೈದರಾಬಾದ್ : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಕಳೆದ 38ದಿನಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಇಂದು ತಮ್ಮ ಹೋರಾಟ ತೀವ್ರಗೊಳಿಸಿರುವ ಟಿ.ಎಸ್.ಆರ್.ಟಿ.ಸಿ ನೌಕರರು ಇಂದು ತೆಲಂಗಾಣ ಸರ್ಕಾರ ಸಚಿವರು ಹಾಗೂ ಶಾಸಕರ ನಿವಾಸಗಳಿಗೆ ಮುತ್ತಿಗೆ ಹಾಕಿದ್ದಾರೆ.

ಸಾರಿಗೆ ನೌಕರರು ಕಳೆದ 38 ದಿನಗಳಿಂದ ಪ್ರತಿಭಟನೆಗಿಳಿದಿದ್ದರೂ ಸಿಎಂ ಕೆ.ಚಂದ್ರಶೇಖರ್ ರಾವ್ ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ. ತೆಲಂಗಾಣ ಸರ್ಕಾರ ಟಿಎಸ್ಆರ್ಟಿಸಿ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸುತ್ತಿರುವ ನೌಕರರು, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಶೀಘ್ರವೇ ದೆಹಲಿಗೆ ಭೇಟಿ ನೀಡಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಟಿಎಸ್ಆರ್ಟಿಸಿ ಕಾರ್ಮಿಕರಿಗೆ ಸಿಎಂ ಕೆ.ಚಂದ್ರಶೇಖರ್ ರಾವ್ ನೀಡಿದ್ದ ಗಡುವು ಮುಗಿದಿದೆ. ನವೆಂಬರ್ 5ರೊಳಗೆ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ವಾಪಸ್ಸಾಗುವಂತೆ ಸಾರಿಗೆ ನೌಕರರಿಗೆ ಸಿಎಂ ಕೆಸಿಆರ್ ಖಡಕ್ ಸೂಚನೆ ನೀಡಿದ್ದರು. ಇದಕ್ಕೆ ಕ್ಯಾರೇ ಎನ್ನದ ಮುಷ್ಕರ ನಿರತ ಕಾರ್ಮಿಕರು ಹೋರಾಟ ಮುಂದುವರೆಸಿದ್ದಾರೆ. ಇದೀಗ ಕಾರ್ಮಿಕರು ಹೋರಾಟ ತೀವ್ರಗೊಳಿಸಿದ್ದಾರೆ. ತೆಲಂಗಾಣ ಸಚಿವ ಮತ್ತು ಶಾಸಕರ ಮನೆಗೆ ಮುತ್ತಿಗೆ ಹಾಕಲು ಮುಂದಾದ ವೇಳೆ ತೆಲಂಗಾಣ ಪೊಲೀಸರು ಕಾರ್ಮಿಕರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆಂದು ಹೇಳಲಾಗಿದೆ.
ಇನ್ನು ತೆಲಂಗಾಣ ಸರ್ಕಾರದ ವಿರುದ್ಧ ಹೋರಾಟದಲ್ಲಿ 22 ಮಂದಿ ಸಾರಿಗೆ ನೌಕರರು ಮೃತಪಟ್ಟಿದ್ದು, ಸಿಎಂ ಚಂದ್ರಶೇಖರ್ ರಾವ್ ಅವರ ನಡೆ ಪ್ರತಿಭಟನಾನಿರತರನ್ನು ಕೆರಳಿಸಿದೆ…

Leave a Comment