ತೆಂಕಿಲ ಗುಡ್ಡ ಅಪಾಯ ವಲಯ ‘ಲಘು ಭೂಕಂಪನದ ಸಾಧ್ಯತೆ

ಪುತ್ತೂರು, ಆ.೧೩- ಪುತ್ತೂರು ನಗರದ ಹೊರವಲಯದ ತೆಂಕಿಲ ದರ್ಖಾಸು ಎಂಬಲ್ಲಿರುವ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಡ್ಡದಲ್ಲಿ ಭೂ ಕಂಪನ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಇದು ’ಅಪಾಯ ವಲಯ’ ಎಂಬ ಸೂಚನೆ ನೀಡಿದ್ದಾರೆ.
ತೆಂಕಿಲ ಗುಡ್ಡದಲ್ಲಿ ಭಾನುವಾರ ಬಿರುಕು ಕಾಣಿಸಿಕೊಂಡಿದ್ದು, ಪತ್ರಿಕೆಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿತ್ತು. ಗುಡ್ಡದ ತಪ್ಪಲು ಪ್ರದೇಶದ ಮಧ್ಯಭಾಗದಲ್ಲಿ ಸುಮಾರು ೨೦೦ ಮೀಟರ್ ಉದ್ದದಲ್ಲಿ ಭೂಮಿ ಬಿರುಕು ಬಿಟ್ಟಿರುವುದು, ಗುಡ್ಡದ ಮೇಲಿನ ಭಾಗದಲ್ಲಿಯೂ ಅಡ್ಡ ಮತ್ತು ನೇರವಾಗಿ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ಇದೇ ಭಾಗದಲ್ಲಿರುವ ಮೊಗೇರ್ಕಳ ಗರಡಿಯ ಬಳಿ ಮಣ್ಣಿನ ಅಡಿಭಾಗದಿಂದ ಮಣ್ಣುಮಿಶ್ರಿತ ನೀರು ಮೇಲೆದ್ದು, ಕೆಳಭಾಗಕ್ಕೆ ಹರಿದು ಹೋಗುತ್ತಿದೆ. ಗುಡ್ಡದ ಮೇಲಿಂದಲೂ ನೀರು ಹರಿದು ಬರುತ್ತಿದೆ. ಈ ಗುಡ್ಡದ ವಾಸ್ತವದ ಸ್ಥಿತಿ ಮಡಿಕೇರಿ ದುರಂತವನ್ನು ನೆನಪಿಸುವಂತಿರುವುದರಿಂದ ಜನತೆಯಲ್ಲಿ ಭೀತಿ ಸೃಷ್ಠಿಸಿದೆ. ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ, ಅಂತರ್‌ಜಲ ಪರಿಶೋಧಕಿ ವಸುಧಾ ಅವರು ಸೋಮವಾರ ಮಧ್ಯಾಹ್ನ ತೆಂಕಿಲ ಗುಡ್ಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಗುಡ್ಡದ ರಚನಾ ವಲಯ ಬಿರುಕುಬಿಟ್ಟಿದ್ದು, ಇದು ಅಪಾಯಕಾರಿ ವಲಯವಾಗಿದೆ. ತೇವಾಂಶ ರಹಿತ ಪದರವು ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತಿದ್ದು, ಒಳಗೆ ಶೇಖರಣೆಗೊಂಡ ನೀರು ಹೊರಹೋಗಲು ಸಾಧ್ಯವಾಗದೆ ಒತ್ತಡ ನಿರ್ಮಾಣವಾಗಿ ಬಿರುಕು ಬಿಟ್ಟಿದೆ. ಇದು ಲಘು ಭೂಕಂಪನದ ಸೂಚನೆಯಾಗಿದ್ದು, ಮಳೆಗಾಲದಲ್ಲಿ ಭೂಕಂಪನವಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಗುಡ್ಡ ಪ್ರದೇಶ ಅಪಾಯಕಾರಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಭೂಕಂಪನ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಪ್ರದೇಶ ವಾಸಕ್ಕೆ ಯೋಗ್ಯವಲ್ಲ. ಗುಡ್ಡದಲ್ಲಿ ಅಲ್ಲಲ್ಲಿ ತೂತುಗಳನ್ನು ಕೊರೆದು ಶೇಖರಣೆಗೊಂಡ ನೀರು ಹೊರಹೋಗುವಂತೆ ಮಾಡುವುದರಿಂದ ತಾತ್ಕಾಲಿಕವಾಗಿ ಅಪಾಯ ತಡೆಯಬಹುದಾಗಿದೆ. ಆದರೆ ಇದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದು ಅವರು ತಿಳಿಸಿದ್ದಾರೆ.

ಅಪಾಯದಲ್ಲಿ ಹಲವು ಮನೆಗಳು
ಗುಡ್ಡದ ತಪ್ಪಲಿನ ಮಧ್ಯಭಾಗದಲ್ಲಿ ಸೇಸಪ್ಪ ಗೌಡ, ಗಿರಿಜಾ, ಕಮಲ, ಮಹಾಲಿಂಗ, ಗುರುವ, ಆನಂದ, ಗಂಗಾಧರ, ಬೇಬಿ,ಸುಶೀಲ, ಸತೀಶ್ ಎಂಬವರ ಮನೆಗಳು ಅಪಾಯದ ವಲಯದಲ್ಲಿದೆ. ಅಲ್ಲದೆ ಗುಡ್ಡದ ತಪ್ಪಲಿನ ಕೆಳಭಾಗದಲ್ಲಿ ಸುಮಾರು ೨೫ಕ್ಕೂ ಅಧಿಕ ಮನೆಗಳಿವೆ. ಅಪಾಯದ ಸೂಚನೆಯಿಂದಾಗಿ ಇಲ್ಲಿನ ಮನೆಮಂದಿ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

Leave a Comment