ತುಳು ಚಿತ್ರದಲ್ಲಿ ನಟಿಸಲು ಸಿದ್ಧ: ಸುನಿಲ್ ಶೆಟ್ಟಿ

ಉಡುಪಿ, ಸೆ.೧೦- ತುಳು ಚಿತ್ರದಲ್ಲಿ ನಾನು ಅಭಿನಯಿಸುತ್ತೇನೆ. ಆದರೆ ತುಳು ನಾಡಿನ ಎಲ್ಲರೂ ನನಗೆ ಮಾತು ಕೊಟ್ಟು ಆ ಸಿನೆಮಾವನ್ನು ನೋಡಬೇಕು. ಅದರಲ್ಲಿ ಬಂದ ಹಣವನ್ನು ಸಮುದಾಯದ ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವ ಕೆಲಸ ಮಾಡಬೇಕು ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಇಂದು ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದಲ್ಲಿ ಚಿತ್ರತಾರೆಯರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ನಿರ್ಮಾಪಕರು ಯಾರೇ ಆಗಿರಲಿ ನಾನು ತುಳು ಸಿನೆಮಾದಲ್ಲಿ ನಟಿಸುತ್ತೇನೆ. ಒಳ್ಳೆಯ ಕೆಲಸಕ್ಕೆ ಅದರ ಹಣ ವಿನಿಯೋಗಿಸುವುದಾದರೆ ಅದರಲ್ಲಿ ಐಶ್ವರ್ಯ ರೈ, ರೋಹಿತ್ ಶೆಟ್ಟಿ, ಶಿಲ್ಪಶೆಟ್ಟಿ ಅವರನ್ನು ತೊಡಗಿಸಿಕೊಳ್ಳುವಂತೆ ನಾನು ಮಾಡುತ್ತೇನೆ ಎಂದರು. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ೪ ವರ್ಷಗಳಿಂದ ನನ್ನಿಂದ ಸಿನೆಮಾ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಅವರು ತೀರಿಕೊಂಡಿದ್ದು, ಇದೀಗ ನಾಲ್ಕು ವರ್ಷಗಳ ನಂತರ ಕನ್ನಡ ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಾಕಷ್ಟು ಚಿತ್ರಗಳು ಬರಲಿವೆ. ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ದಯಾ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಗುರುಕಿರಣ್, ರಾಜ್ ಬಿ.ಶೆಟ್ಟಿ, ಶ್ರೀನಿಧಿ ಶೆಟ್ಟಿ, ಗುರು ಪ್ರಸಾದ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Leave a Comment