ತುಮುಲ್‌ನಿಂದ ಲೀಟರ್ ಹಾಲಿಗೆ 1 ರೂ. ಹೆಚ್ಚಳ: ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಆಡಳಿತ ಮಂಡಳಿ

ತುಮಕೂರು, ಸೆ. ೧೧- ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿ ಜಾನುವಾರುಗಳಿಗೆ ಮೇವಿನ ಅಭಾವ ಸೃಷ್ಠಿಯಾಗುತ್ತಿರುವುದನ್ನು ಮನಗಂಡಿರುವ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 1 ರೂ. ದರ ಹೆಚ್ಚಿಸಲು ತೀರ್ಮಾನಿಸಿದೆ.

ಮಳೆ ಇಲ್ಲದೆ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ರೈತರು ಜಾನುವಾರುಗಳಿಗೆ ಮೇವು ಒದಗಿಸಲು ಪರದಾಡುವಂತಾಗಿದೆ. ರೈತರ ಈ ಸಂಕಷ್ಟಗಳಿಗೆ ಸ್ಪಂದಿಸಲು ಮುಂದಾಗಿರುವ ತುಮುಲ್ ಆಡಳಿತ ಮಂಡಳಿಯ ಸಭೆಯಲ್ಲಿ ಸೆ. 16 ರಿಂದ ಪ್ರತಿ ಲೀಟರ್ ಹಾಲಿಗೆ ರೈತರಿಗೆ 1 ರೂ. ದರ ಹೆಚ್ಚಳ ಮಾ‌ಡಲು ನಿರ್ಧಾರ ಕೈಗೊಳ್ಳಲಾಯಿತು ಎಂದು ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ಪ್ರಸ್ತುತ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಒಕ್ಕೂಟದಿಂದ 21.73 ರೂ. ದರ ನೀಡುತ್ತಿದ್ದು, ಈ ದರ ಹೆಚ್ಚಳದಿಂದ ಪ್ರತಿ ಲೀಟರ್ ಹಾಲಿಗೆ 22.73 ರೂ. ನೀಡಲಾಗುತ್ತದೆ. 22.73 ರೂ.ನಲ್ಲಿ 22 ರೂ. ರೈತರಿಗೆ ಹಾಗ ಸಂಘಕ್ಕೆ 73 ಪೈಸೆ ಸಂದಾಯವಾಗುತ್ತದೆ ಎಂದರು.

ಗುಣಮಟ್ಟದ ಹಾಲು ಅಂದರೆ 3.5 ಜಿಡ್ಡಿನಾಂಶ ಹಾಗೂ 8.5 ಎಸ್.ಎನ್.ಎಫ್. ಉಳ್ಳ ಹಾಲಿಗೆ ಈ ದರ ಅನ್ವಯವಾಗಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲೇ ತುಮಕೂರು ಹಾಲು ಒಕ್ಕೂಟ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ ಎಂದ ಅವರು, ರೈತರು ಜಾನುವಾರುಗಳಿಗೆ ನೀಡುವ ಪ್ರತಿ ಕೆ.ಜಿ. ಫೀಡ್‌ಗೆ 2 ರೂ. ಕಡಿಮೆ ಮಾಡಲಾಗಿದೆ ಎಂದರು.

ದೊಡ್ಡ ಮೊಸರು ಘಟಕ
ರಾಜ್ಯದಲ್ಲಿ ಒಕ್ಕೂಟದ ಮೊಸರಿಗೆ ಉತ್ತಮ ಹೆಸರು ಮತ್ತು ಬೇಡಿಕೆಯಿದ್ದು, ಬೇಡಿಕೆ ಪೂರೈಸಲು ಅನುಕೂಲವಾಗುವಂತೆ 5 ಕೋಟಿ ರೂ. ವೆಚ್ಚದಲ್ಲಿ ಮೊಸರಿನ ಉತ್ಪಾದನಾ ಘಟಕದ 1 ಲಕ್ಷ ಲೀ. ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇಡೀ ರಾಜ್ಯದಲ್ಲಿ ತುಮಕೂರು ಮೊಸರಿನ ಘಟಕ ಅತಿ ದೊಡ್ಡ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಹೆಚ್ಚುವರಿ ಹಾಲಿನ ಸಂಸ್ಕರಣೆಗೆ ಅನುಕೂಲವಾಗುವಂತೆ 5.46 ಕೋಟಿ ರೂ. ವೆಚ್ಚದಲ್ಲಿ ಹಬೆಯಂತ್ರವನ್ನು ಸ್ಥಾಪಿಸಲಾಗಿದೆ. 25 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದ್ದ ಫ್ಲೆಕ್ಸಿಪ್ಯಾಕ್ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳ ಬೇಡಿಕೆ ಪೂರೈಸಲು ಅನುಕೂಲವಾಗುವಂತೆ 2ನೇ ಲೈನ್‌ಫ್ಲೆಕ್ಸಿ ಪ್ಯಾಕ್ ಘಟಕವನ್ನು 27 ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಲಾಗುತ್ತಿದೆ ಎಂದರು.

ತಾವು ಒಕ್ಕೂಟದ ಅಧ್ಯಕ್ಷರಾಗಿ 5 ವರ್ಷ ಕಳೆಯುತ್ತಿದ್ದು, ಪ್ರಾರಂಭದಲ್ಲಿ ಶೇಖರಿಸಲಾಗುತ್ತಿದ್ದ 4.22 ಲಕ್ಷ ಲೀಟರ್ ಹಾಲಿನ ಪ್ರಮಾಣ ಪ್ರಸ್ತುತ 7.75 ಲಕ್ಷ ಲೀಟರ್‌ಗೆ ಏರಿಕೆ ಕಂಡಿದೆ. 2.02 ಲಕ್ಷ ಲೀಟರ್ ಇದ್ದ ಮಾರಾಟ ಈಗ 3.15 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ ಎಂದರು.

ನಿವ್ವಳ ಲಾಭ
530 ಕೋಟಿ ರೂ. ಇದ್ದ ವಹಿವಾಟು ಪ್ರಸ್ತುತ 922 ಕೋಟಿ ರೂ.ಗೆ ಹೆಚ್ಚಳವಾಗಿದ್ದು, 28 ಲಕ್ಷ ರೂ.ಗಳಿಂದ 5.18 ಕೋಟಿ ರೂ.ಗೆ ನಿವ್ವಳ ಲಾಭ ಏರಿಕೆಯಾಗಿದೆ ಎಂದು ಅವರು ಹೇಳಿದರು.

ವಿಮಾ ಸೌಲಭ್ಯ
ಆರ್ಥಿಕ ಸಂಕಷ್ಟದಲ್ಲಿರುವ ಹಾಲು ಉತ್ಪಾದಕ ಸದಸ್ಯರುಗಳು ರಾಸುಗಳಿಗೆ ಪ್ರಪ್ರಥಮವಾಗಿ ಒಕ್ಕೂಟದ ವತಿಯಿಂದ 7 ಸಾವಿರ ರಾಸುಗಳಿಗೆ ವಿಮಾ ಸೌಲಭ್ಯ ಒದಗಿಸಲಾಗಿದೆ. 18 ರಿಂದ 59 ವರ್ಷದೊಳಗಿನ ಹಾಲು ಉತ್ಪಾದಕ ಸದಸ್ಯರುಗಳು ಮತ್ತು ಸಂಘಗಳ ಸಿಬ್ಬಂದಿಗಳಿಗೆ ರೂ. 1 ಲಕ್ಷಗಳ ವಿಮಾ ಸೌಲಭ್ಯ ಮತ್ತು 60 ವರ್ಷ ಮೀರಿದ ಸದಸ್ಯರುಗಳು ಮರಣ ಹೊಂದಿದಲ್ಲಿ ಅವರಿಗೆ ವಿಮಾ ಪರಿಹಾರ ಮೊತ್ತ ದೊರೆಯದ ಕಾರಣ, ಅಂತಹ ಸದಸ್ಯರಿಗೆ ಒಟ್ಟು 25 ಸಾವಿರ ಪರಿಹಾರವನ್ನು ಕಲ್ಯಾಣ ಟ್ರಸ್ಟ್ ಹಾಗೂ ಒಕ್ಕೂಟ ವತಿಯಿಂದ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಒಕ್ಕೂಟದ ವತಿಯಿಂದ 60 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ಒಂದು ಘಟಕವನ್ನು ಹೊರತುಪಡಿಸಿ ಉಳಿದ ಎಲ್ಲಾ ಘಟಕಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಜಿಲ್ಲೆಯಲ್ಲಿ 55 ಸಾವಿರ ರಾಸುಗಳಿಗೆ ಒಕ್ಕೂಟದ ವತಿಯಿಂದ ವಿಮಾ ಸೌಲಭ್ಯ ಕಲ್ಪಿಸಲಾಗಿದ್ದು, ಈಗಾಗಲೇ 1150 ರಾಸುಗಳು ಮೃತಪಟ್ಟಿವೆ ಎಂದು ಅವರು ಹೇಳಿದರು.

ಮುಂದಿನ ತಿಂಗಳು ಚುನಾವಣೆ
ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ 4 ವರ್ಷ 8 ತಿಂಗಳು ಕಳೆದಿದ್ದು, ಮುಂದಿನ ತಿಂಗಳು 30ಕ್ಕೆ (ಅ. 30) ಒಕ್ಕೂಟದ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕರಾದ ಹಳೇಮನೆ ಶಿವನಂಜಪ್ಪ, ಪ್ರಕಾಶ್, ವಿಜಯಶಂಕರ್, ವ್ಯವಸ್ಥಾಪಕ ನಿರ್ದೇಶಕ ಬಿ. ಮುನೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Comment