ತುಮಕೂರು ಬಳಿ ಸರಣಿ ಅಪಘಾತ: 25ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ತುಮಕೂರು, ಮೇ ೧೪- ನಗರದ ಹೊರವಲಯದ ಊರುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೆಳ್ಳಂಬೆಳಿಗ್ಗೆ ಕಾರು, ಲಾರಿ ಮತ್ತು ಬಸ್‌ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಸುಮಾರು 25ಕ್ಕೂ ಅಧಿಕ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಬೆಳಿಗ್ಗೆ 7.30ರ ಸಮಯದಲ್ಲಿ ತುಮಕೂರು ನಗರದಿಂದ ಸಿರಾಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಊರುಕೆರೆ ಬಳಿ ಹಿಂದಿನಿಂದ ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ಅಪ್ಪಳಿಸಿದ್ದರಿಂದ ಈ ಕಾರಿನಲ್ಲಿ ಮಹಿಳೆಯೊಬ್ಬರಿಗೆ ತೀವ್ರ ಪೆಟ್ಟಾಗಿದೆ.

ಈ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ವೃತ್ತ ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂಧನ್ ಅವರು ಈ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದ್ದರು. ಅಷ್ಟರಲ್ಲಿ ಬೆಂಗಳೂರು ಕಡೆಯ ಮತ್ತೊಂದು ಕಾರು ಅಪಘಾತ ನಡೆದಿರುವುದನ್ನು ಗಮನಿಸದೆ ಅತಿ ವೇಗವಾಗಿ ಬಂದಿದೆ. ಅಪಘಾತ ನಡೆದ ಸ್ಥಳದ ಸಮೀಪಕ್ಕೆ ಬಂದ ನಂತರ ಕಾರನ್ನು ಚಾಲಕ ಬಲಭಾಗಕ್ಕೆ ಎಳೆದಿದ್ದಾರೆ. ಕಾರು ಬಲಭಾಗಕ್ಕೆ ತಿರುಗುತ್ತಿದ್ದಂತೆ ಹಿಂದಿನಿಂದ ಬಲಭಾಗದಲ್ಲಿ ಮೀನು ತುಂಬಿಕೊಂಡು ಬರುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಲಾರಿಯಲ್ಲಿದ್ದು ಮೀನುಗಳು ರಸ್ತೆಗೆ ಬಿದ್ದಿವೆ.

ಅದೇ ಸಮಯಕ್ಕೆ ಸಿರಾ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಲಾರಿಯ ಚಾಲಕ ರಸ್ತೆಗೆ ಮೀನುಗಳನ್ನು ಬಿದ್ದಿರುವುದನ್ನು ಕಂಡು ಲಾರಿಯನ್ನು ನಿಧಾನಗತಿಯಲ್ಲಿ ಚಾಲನೆ ಮಾಡುತ್ತಿದ್ದನು.

ಈ ಲಾರಿಯ ಹಿಂದೆ ಬೆಳಗಾವಿಯಿಂದ ಬರುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಮುಂದೆ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಅಪ್ಪಳಿಸಿದ್ದರಿಂದ ಬಸ್‌ನಲ್ಲಿದ್ದ ಸುಮಾರು 25ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಸೀಬರ್ಡ್ ಬಸ್ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.

ಬಸ್‌ನಲ್ಲಿದ್ದ ಪ್ರಯಾಣಿಕರಾದ ರಂಗನಾಥ್, ನಂದೀಶ್, ನಯಾಜ್, ಭರತ್, ಅವಿನಾಶ್, ಸುರೇಶ್, ಬಸವರಾಜು, ವರದಮಾನ್, ಹಾಲಪ್ಪಮಚ್ಚಂಡಿ, ರಾಜೇಂದ್ರ ಕಾಂಬಳೆ, ಶುಭಗಿಣಿ, ರಜೀಯಾನಿಜಾಂ, ಶಿರಿನ್, ಶ್ರೀದೇವಿ, ಭಾರ್ಗವಿ, ವಿದ್ಯಾದೇಶಪಾಂಡೆ, ಸತೀಶ್, ರಾಜಶ್ರೀ, ಸಂತೋಷ್, ಕನ್‌ಚನ್ ಮಿಶ್ರ, ಆರ್.ಹೆಚ್. ಕುಲಕರ್ಣಿ ಸೇರಿದಂತೆ 25ಕ್ಕೂ ಅಧಿಕ ಮಂದಿಗೆ ತೀವ್ರ ಪೆಟ್ಟಾಗಿದ್ದು, ಇವರುಗಳ ಪೈಕಿ ಇಬ್ಬರಿಗೆ ಕಾಲು ಮುರಿದಿದೆ ಎಂದು ತಿಳಿದು ಬಂದಿದೆ.

ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರು ಸ್ಥಳಕ್ಕೆ ಧಾವಿಸಿ 5 108 ತುರ್ತು ವಾಹನಗಳನ್ನು ಸ್ಥಳಕ್ಕೆ ಕರೆಸಿ ಕ್ಷಣಾರ್ಧದಲ್ಲಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಗಾಯಾಳುಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.

ಇಂದು ಸಂಭವಿಸಿದ ಈ ಸರಣಿ ಅಪಘಾತದಲ್ಲಿ ಗಾಯಗೊಂಡವರಿಗೆ ಶುಶ್ರೂಷೆ ಮಾಡುವಲ್ಲಿ 108 ವಾಹನದ ಸಿಬ್ಬಂದಿಗಳು ಸಹ ಶ್ರಮಿಸುವ ಮೂಲಕ ಮಾನವೀಯತೆ ಮೆರೆದರು.

ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗುತ್ತಿರುವ ಗಾಯಾಳುಗಳನ್ನು ಯೋಗಕ್ಷೇಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಡಿವೈಎಸ್ಪಿ ತಿಪ್ಪೇಸ್ವಾಮಿ ವಿಚಾರಿಸಿದರು.

ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment