ತುಮಕೂರಿನಲ್ಲಿ 25ಕ್ಕೇರಿದ ಸೋಂಕಿತರು

ತುಮಕೂರು, ಮೇ ೨೨- ಕಲ್ಪತರುನಾಡಿಗೆ ಬಿಟ್ಟೂ ಬಿಡದೆ ಕಾಡುತ್ತಿರುವ ಮುಂಬೈ ಕಂಟಕದಿಂದಾಗಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇದು ಒಂದೇ ದಿನ 9 ಮಂದಿಗೆ ಸೋಂಕು ದೃಢಪಟ್ಟಿದೆ.

ತುರುವೇಕೆರೆ ತಾಲ್ಲೂಕಿನ ಮಲ್ಲಾಘಟದ 4 ಮಂದಿ, ತುಮಕೂರು ತಾಲ್ಲೂಕಿನ ಹೆಬ್ಬೂರಿನಲ್ಲಿ ಒಬ್ಬರಿಗೆ, ತುಮಕೂರಿನ ಸದಾಶಿವನಗರದ ಓರ್ವ ಮಹಿಳೆಗೆ, ಕಲ್ಲೂರಿನ ಇಬ್ಬರಿಗೆ ಹಾಗೂ ಡಾಬಸ್‌ಪೇಟೆಯ ಓರ್ವ ಮಹಿಳೆ ಸೇರಿದಂತೆ ಒಟ್ಟು 9 ಮಂದಿಗೆ ಇಂದು ಸೋಂಕು ಪತ್ತೆಯಾಗಿದೆ.

ಮೊನ್ನೆ 4 ಮಂದಿಗೆ, ನಿನ್ನೆ ಒಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಇಂದು ದಿಢೀರನೆ 8 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ನಿನ್ನೆವರೆಗೆ 16ಕ್ಕೆ ಏರಿಕೆಯಾಗಿದ್ದ ಸೋಂಕಿತರ ಸಂಖ್ಯೆ ಇಂದು 9 ಮಂದಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ.

ಇಂದು ಸೋಂಕು ದೃಢಪಟ್ಟಿರುವವರ ಪೈಕಿ 6 ಮಂದಿಗೆ ಮುಂಬೈ ಪ್ರಯಾಣದ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರ ಪೈಕಿ ನಾಲ್ವರನ್ನು ತುಮಕೂರಿನ ಕ್ವಾರಂಟೈನ್ ಸೆಂಟರ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಸೋಂಕು ದೃಢಪಟ್ಟಿದ್ದರಿಂದ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಬ್ಬೂರಿನ 66 ವರ್ಷದ ವೃದ್ಧನಿಗೆ ಸೋಂಕು ತಗುಲಿದ್ದು, ಇವರಿಗೂ ಸಹ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ತುಮಕೂರಿನ ಸದಾಶಿವನಗರದ 24 ವರ್ಷದ ಗರ್ಭಿಣಿ ಮಹಿಳೆಗೂ ಸೋಂಕು ಪತ್ತೆಯಾಗಿದ್ದರಿಂದ ಈಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದು, ರಾತ್ರಿ ಹೆರಿಗೆಯಾಗಿ ತಾಯಿ-ಮಗು ಇಬ್ಬರು ಚೆನ್ನಾಗಿದ್ದಾರೆ ಎಂದು ಮಾಹಿತಿ ಬಂದಿದೆ. ಹಾಗೆಯೇ ಡಾಬಸ್‌ಪೇಟೆಯ 55 ವರ್ಷದ ಮಹಿಳೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದ್ದರಿಂದ ಈಕೆಯನ್ನು ಜಿಲ್ಲಾ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದರು.

ನಿನ್ನೆ ತುಮಕೂರಿನ ಖಾದರ್ ನಗರದಲ್ಲಿ ಒಂದು ಪಾಸಿಟಿವ್ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಖಾದರ್‌ನಗರವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಮಾಡಿ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.

ಹೆಬ್ಬೂರು-ಸದಾಶಿವನಗರ ಕಂಟೈನ್ಮೆಂಟ್ ವಲಯ

ಹೆಬ್ಬೂರು ಮತ್ತು ತುಮಕೂರಿನ ಸದಾಶಿವನಗರದಲ್ಲೂ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೆಬ್ಬೂರು ಮತ್ತು ಸದಾಶಿವನಗರ ಎರಡು ಪ್ರದೇಶವನ್ನು ಕಂಟೈನ್ಮೆಂಟ್ ಝೋನ್‌ಗಳನ್ನಾಗಿ ಘೋಷಿಸಲಾಗಿದೆ.
ಇಲ್ಲಿನ ಜನರು ಯಾವುದೇ ಕಾರಣ ಮಾಸ್ಕ್ ಧರಿಸದೆ ಅಸಡ್ಡೆ ತೋರಬಾರದು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂದು ಅವರು ಮನವಿ ಮಾಡಿದ್ದಾರೆ.

Leave a Comment