ತುಮಕೂರಿನಲ್ಲಿ ರೌ‌ಡಿಶೀಟರ್ ಹತ್ಯೆ

ತುಮಕೂರು, ನ. ೨- ಕುಡಿದ ಮತ್ತಿನಲ್ಲಿದ್ದ ರೌಡಿ ಶೀಟರ್‌ ತಲೆ ಮೇಲೆ ಸ್ನೇಹಿತನೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಬೆಳಗುಂಬ ಬಸ್ ನಿಲ್ದಾಣದಲ್ಲಿ ಕಳೆದ ರಾತ್ರಿ ನಡೆದಿದೆ.
ಇಲ್ಲಿನ ವಿದ್ಯಾನಗರದ ವಾಸಿ ಮೋಹನ್‌ಕುಮಾರ್ ಅಲಿಯಾಸ್ ಚಟ್ಟ ಕುಮಾರ್ (35) ಎಂಬಾತನೇ ಕೊಲೆಯಾಗಿರುವ ರೌಡಿಶೀಟರ್. ಮೋಹನ್‌ಕುಮಾರ್ ಹಾಗೂ ಈತನ ಸ್ನೇಹಿತ ಟೆಂಪೋ ರಾಜ ಹನುಮಂತರಪುರದ ಬಾರ್‌ವೊಂದರಲ್ಲಿ ಕಂಠಪೂರ್ತಿ ಕುಡಿದಿದ್ದಾರೆ. ಇಬ್ಬರೂ ಬೈಕ್ ಏರಿ ಬೆಳಗುಂಬ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.
ಕು‌ಡಿದ ಮತ್ತಿನಲ್ಲಿದ್ದ ಇವರಿಬ್ಬರ ನಡುವೆ ಯಾವುದೇ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ಚಟ್ಟ ಕುಮಾರ್ ಮೊದಲು ಟೆಂಪೋ ರಾಜನ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ರಾಜ ಅಲ್ಲಿಯೆ ಪಕ್ಕದಲ್ಲಿದ್ದ ಕಲ್ಲು ಎತ್ತಿಕೊಂಡು ಮೋಹನ್‌ಕುಮಾರನ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಕೊಲೆಯಾಗಿರುವ ಮೋಹನ್‌ಕುಮಾರ್ 3 ಕೊಲೆ ಪ್ರಕರಣ, ಕಳ್ಳತನ ಹಾಗೂ ದರೋಡೆ ಪ್ರಕರಣದ ಭಾಗಿಯಾಗಿದ್ದು, ಈತನ ವಿರುದ್ಧ ಹೊಸಬಡಾವಣೆ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Comment