ತುಮಕೂರಿನಲ್ಲಿ ಮತ್ತೆ ಇಬ್ಬರಿಗೆ ಸೋಂಕು

ತುಮಕೂರು, ಮೇ ೨೪- ಕಲ್ಪತರುನಾಡಿನಲ್ಲಿ ಈಗಾಗಲೇ ಆತಂಕಕ್ಕೆ ಒಳಗಾಗಿರುವ ಜನರಿಗೆ ಇಂದು ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ಮತ್ತಷ್ಟು ಬೆಚ್ಚಿ ಬೀಳುವಂತೆ ಮಾಡಿದೆ.

ಇಂದು ಇಬ್ಬರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಪಾವಗಡ ತಾಲ್ಲೂಕಿಗೆ ಮೇ 5 ರಂದು ಗುಜರಾತ್‌ನಿಂದ ಬಂದಿದ್ದ 13 ಜನರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿತ್ತು. ಇದಾದ 12 ದಿನದ ಬಳಿಕ ಗಂಟಲು ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಮತ್ತೊಬ್ಬರು ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ. ‌

ಮತ್ತೊಂದು ಪ್ರಕರಣ ತಿಪಟೂರು ತಾಲ್ಲೂಕಿನಿಂದ ವರದಿಯಾಗಿದ್ದು, 50 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಈತ ಟ್ರಕ್ ಚಾಲಕನಾಗಿದ್ದು, ಮೇ 9 ರಂದು ಮಹಾರಾಷ್ಟ್ರದಿಂದ ತಿಪಟೂರಿಗೆ ಬಂದಿದ್ದರು. ಇವರ ಮಾದರಿಗಳನ್ನು ಪಡೆದು ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ.

ಪಾವಗಡ ಮತ್ತು ತಿಪಟೂರಿನ ಸೋಂಕಿತ ವ್ಯಕ್ತಿಗಳನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತಿಪಟೂರಿನ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಗಾಂಧಿನಗರವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿತ್ತು. ಈ ಬಡಾವಣೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮೊನ್ನೆಯಷ್ಟೆ ಸೋಂಕು ದೃಢಪಟ್ಟಿದ್ದ ಹೆಬ್ಬೂರು ಸಮೀಪದ ಮಾಯಪ್ಪನಪಾಳ್ಯದ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.

ಜಿಲ್ಲೆಗೆ ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಹಾಗೆಯೇ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಮೇಲೆ ಸಾರ್ವಜನಿಕರು ಸಹ ನಿಗಾ ಇಟ್ಟು, ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

Share

Leave a Comment