ತುಮಕೂರಿನಲ್ಲಿ ಈಝಿಮೈಂಡ್‌ನಿಂದ ಕೋಟ್ಯಂತರ ರೂ. ವಂಚನೆ

ತುಮಕೂರು, ಜೂ. ೧೫- ಬೆಂಗಳೂರಿನ ಐಎಂಎ ಪ್ರಕರಣ ಮಾದರಿಯಲ್ಲಿ ತುಮಕೂರಿನಲ್ಲೂ ಸಾರ್ವಜನಿಕರಿಂದ ಕೋಟ್ಯಂತರ ರೂ ಸಂಗ್ರಹಿಸಿ ಪಂಗನಾಮ ಹಾಕಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ನಗರದ ಹೆಚ್‍ಎಂಎಸ್ ಶಾದಿ ಮಹಲ್ ಕಾಂಪ್ಲೆಕ್ಸ್‌ನಲ್ಲಿ ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಎಂಬ ಹೆಸರಿನ ಕಛೇರಿ ತೆರೆದು ಅಸ್ಲಾಂಪಾಷಾ ಎಂಬುವರು ಸಾರ್ವಜನಿಕರಿಂದ ಸುಮಾರು 250 ರಿಂದ 300 ಕೋಟಿ ರೂ ಸಂಗ್ರಹಿಸಿ ನಾಪತ್ತೆಯಾಗಿದ್ದಾರೆ.

ಈಝಿ ಮೈಂಡ್  ಮಾರ್ಕೆಟಿಂಗ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಸುಮಾರು 600ಕ್ಕೂ ಹೆಚ್ಚು ಮುಸ್ಲಿಂರಿಗೆ ಸುಮಾರು 250 ರಿಂದ 300 ಕೋಟಿಗೂ ಅಧಿಕ  ಪಂಗನಾಮ ಹಾಕಲಾಗಿದೆ.
ಊಬರ್ ವೋಲಾ ಸಂಸ್ಥೆಯಲ್ಲಿ ಹಣ ತೊಡಗಿಸಿ ತಿಂಗಳ ಲಾಭ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ಹಣ ಸಂಗ್ರಹಿಸಿ ಮಕ್ಮಲ್ ಟೋಪಿ ಹಾಕಲಾಗಿದೆ.

ಅಸ್ಲಂಪಾಷಾ ಎಂಬುವರು ಈ ಕಂಪೆನಿ ಸ್ಥಾಪಿಸಿದ್ದು, ವೋಲಾ ಊಬರ್  ಹಾಗೂ ಪೌಲ್ಟ್ರಿ ಫಾರಂಗಳಿಗೆ ಹಣ ವಿನಿಯೋಗಿಸಿ ಅದರ ತಿಂಗಳ ಲಾಭಾಂಶವನ್ನು ನಿಮಗೆ ಕೊಡ್ತೀನಿ ಎಂದು ಹೇಳಿ ಕೋಟ್ಯಂತರ ರೂ ಸಂಗ್ರಹಿಸಿದ್ದಾರೆ. ಅದರಂತೆ ಸುಮಾರು 600 ಜನ ಗ್ರಾಹಕರಿಗೆ ಬಾಂಡ್ ಕೂಡಾ ಕೊಟ್ಟಿದ್ದಾರೆ. ಒಬ್ಬೊಬ್ಬ ಗ್ರಾಹಕ 1 ಲಕ್ಷದಿಂದ ಒಂದು ಕೋಟಿವರೆಗೂ ಹಣವನ್ನು ವಿನಿಯೋಗಿಸಿದ್ದಾರೆ ಎನ್ನಲಾಗಿದೆ.

1 ಲಕ್ಷ ರೂಪಾಯಿಗೆ ಬಂಡವಾಳ ಹೂಡಿಕೆಗೆ ತಿಂಗಳ ಲಾಭಾಂಶವಾಗಿ 7 ಸಾವಿರ ಕೊಡುವ ನಾಟಕ ಆಡಿದ್ದಾರೆ. ಅಂದರೆ 10 ಲಕ್ಷ ರೂ ಬಂಡವಾಳ ಹೂಡಿದವರಿಗೆ ತಿಂಗಳಿಗೆ 70 ಸಾವಿರ ರೂ. ಲಾಭಾಂಶ ಸಂದಾಯ ಮಾಡಿದ್ದಾರೆ. ಆರಂಭದಲ್ಲಿ ನೆಪಮಾತ್ರಕ್ಕೆ ಲಾಭಾಂಶ ಕೊಡುವ ನಾಟಕವಾಡಿ  ನಂಬಿಕೆ ಬರುವಂತೆ ನಡೆದುಕೊಂಡಿದ್ದಾರೆ. ಹಾಗಾಗಿ ಗ್ರಾಹಕರು ಲಾಭಾಂಶದ ಅತಿ ಆಸೆಯಿಂದಾಗಿ ಇನ್ನೂ ಹೆಚ್ಚು ಹೆಚ್ಚು ಹಣ ಬಂಡವಾಳ ಹೂಡಿದ್ದಾರೆ. ಕಳೆದ ಡಿಸೆಂಬರ್‌ನಿಂದ ಯಾವುದೇ ರೀತಿಯ ಲಾಭಾಂಶ ಕೊಡದೇ ಕಂಪೆನಿ ಮುಚ್ಚಲಾಗಿದೆ.

ವಿಪರ್ಯಾಸವೆಂದರೆ ಬೆಂಗಳೂರಿನ ಐಎಂಎ ಹಾಗೆಯೇ ಇಲ್ಲೂ ಮೋಸ ಹೋದವರೂ ಮುಸ್ಲಿಂ ಬಾಂಧವರೇ ಹೆಚ್ಚಾಗಿದ್ದಾರೆ. ಸಂಸ್ಥೆಯ ಎಂ.ಡಿ. ಅಸ್ಲಂಪಾಷಾ, ಮ್ಯಾನೇಜರ್ ಸುಮಾಜ್ ಹಾಗೂ ಕಾರ್ಯದರ್ಶಿ ಅಸದ್ ಬಣ್ಣದ ಮಾತುಗಳನ್ನಾಡಿ ಅಮಾಯಕರನ್ನು ವಂಚಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಸಂಸ್ಧೆಯ ವ್ಯವಸ್ಥಾಪಕ ನಿರ್ದೇಶಕ ಅಸ್ಲಂಪಾಷಾ ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದು, ನಿಮ್ಮ ಹಣ ಎಲ್ಲೂ ಹೋಗಲ್ಲ, ನಾನು ರಂಜಾನ್ ಹಬ್ಬ ಮುಗಿಸಿಕೊಂಡು ಊರಿಗೆ ಬಂದು ನಿಮ್ಮ ಹಣದ ಸೆಟಲ್‌ಮೆಂಟ್ ಮಾಡ್ತೀನಿ ಎಂದು ವಿಡಿಯೋ ಮತ್ತು ಆಡಿಯೋ ಮಾಡಿ ಕಳುಹಿಸಿದ್ದಾನೆ. ಈತ ಮಾಡಿ ಕಳುಹಿಸಿರುವ ವಿಡಿಯೋ ನೋಡಿ, ಆಡಿಯೋ ಕೇಳಿದ ಗ್ರಾಹಕರು ಕೊಂಚ ನಿಟ್ಟುಸಿರು ಬಿಟ್ಟಿದ್ದರು.

ಈ ಆಡಿಯೋದಲ್ಲಿ ಪೊಲೀಸರಿಗೆ ದೂರು ನೀಡಿದರೆ ಎಲ್ಲರಿಗೂ ತೊಂದರೆಯಾಗುತ್ತದೆ. ನಿಮಗೆ ಸಿಗುವ ಅಸಲು ಕೂಡಾ ಸಿಗುವುದಿಲ್ಲ ಎಂದು ಅಸ್ಲಾಂಪಾಷ ಹೇಳಿದ್ದನು. ಹಾಗಾಗಿ ಯಾವೊಬ್ಬ ಗ್ರಾಹಕರು ಪೊಲೀಸರಿಗೆ ದೂರು ಕೊಡುವ ಮನಸ್ಸು ಮಾಡಿರಲಿಲ್ಲ ಎನ್ನುತ್ತಾರೆ ಗ್ರಾಹಕ ನಿಸ್ಸಾರ್ ಅಹಮದ್.

ಆದರೆ ರಂಜಾನ್ ಹಬ್ಬ ಮುಗಿದು 10 ದಿನ ಕಳೆದರೂ  ಅಸ್ಲಂಪಾಷಾ ಪತ್ತೇ ಇಲ್ಲ. ಮೊಬೈಲ್ ಸಂಪರ್ಕವೂ ಇಲ್ಲ. ಇತ್ತ ಮ್ಯಾನೇಜರ್ ಹಾಗೂ ಕಾರ್ಯದರ್ಶಿಗಳೂ ತಲೆಮರೆಸಿಕೊಂಡಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನ ಐಎಂಎ ಕಂಪೆನಿಯ ದೋಖಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಈಝಿಮೈಂಡ್ ಸಂಸ್ಥೆ ಗ್ರಾಹಕರು ನಿನ್ನೆ ಕಚೇರಿ ಬಳಿ ಜಮಾಯಿಸಿದ್ದರು.

ಇಂದು ಗ್ರಾಹಕರೆಲ್ಲರೂ ಒಟ್ಟಿಗೆ ಸೇರಿ ಪೊಲೀಸರಿಗೆ ದೂರು ನೀಡಲು ನಗರ ಪೊಲೀಸ್ ಠಾಣೆಯ ಮುಂದೆ ಸರದಿಯ ಸಾಲಿನಲ್ಲಿ ನಿಂತು ಜಮಾಯಿಸಿದ್ದಾರೆ. ವಂಚನೆಗೊಳಗಾದ ಗ್ರಾಹಕರ ದೂರನ್ನು ಸ್ವೀಕರಿಸುತ್ತಿರುವ ಪೊಲೀಸರು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸ್ಪಂದಿಸುತ್ತಿದ್ದಾರೆ ಎಂಬ ಮಾತುಗಳು ಈ ಗ್ರಾಹಕರಿಂದ ಕೇಳಿ ಬರುತ್ತಿವೆ.

ಲಾಭಾಂಶದ ಆಸೆಗೆ ಬಿದ್ದು ಲಕ್ಷದಿಂದ ಕೋಟಿವರೆಗೆ ಹಣ ಹೂಡಿಕೆ ಮಾಡಿ ಕಳೆದುಕೊಂಡಿರುವ ಗ್ರಾಹಕರು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

Leave a Comment