ತುಂಗಭದ್ರ ನದಿ ತೀರದಲ್ಲಿ ಅಧಿಕಾರಿಗಳ ಗಸ್ತು

ಸಿರುಗುಪ್ಪ, ಸೆ.10: ತುಂಗಭದ್ರ ಜಲಾಶಯದಿಂದ ತುಂಗಭದ್ರ ನದಿಗೆ ಒಂದುವರೆ ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ತಾಲೂಕಿನಲ್ಲಿ ಹರಿಯುವ ತುಂಗಭದ್ರ ನದಿಯು ತುಂಬಿ ಹರಿಯುತ್ತಿದೆ.

ನದಿ ತೀರದಲ್ಲಿರುವ ಕೆಲವು ಗ್ರಾಮಗಳ ರೈತರ ಹೊಲಗಳಿಗೆ ಪ್ರವಾಹದ ನೀರು ನುಗ್ಗಿವೆ. ನದಿ ತೀರದಲ್ಲಿರುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸುವಂತೆ ತಾಲೂಕು ಆಡಳಿತ ರೈತರಿಗೆ ಮೊದಲೆ ಸೂಚನೆ ನೀಡಿದ್ದರಿಂದ ಕೆಲವು ರೈತರು ತಮ್ಮ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಿದ್ದಾರೆ.

ತುಂಗಭದ್ರ ನದಿಯಲ್ಲಿ ನೀರು ಬಿಟ್ಟಿರುವ ಪರಿಣಾಮ ಯಾವುದೇ ಅನಾಹುತ ಸಂಭವಿಸದಂತೆ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದಲ್ಲಿರುವ ಗ್ರಾಮಸ್ತರು ನದಿಗೆ ಇಳಿಯದಂತೆ ಟಾಂಟಾಂ ಹಾಕಿಸಲಾಗಿದೆ.

ನದಿ ದಂಡೆಯಲ್ಲಿರುವ ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ಇಳಿಯದಂತೆ ತಾಲೂಕು ಆಡಳಿತ ಗ್ರಾಮಗಳಲ್ಲಿ ಮೂರು ದಿನಗಳಿಂದ ಟಾಂ ಟಾಂ ಹಾಕಿ ಪ್ರಚಾರ ಮಾಡಲಾಗಿದ್ದು, ತುಂಗಭದ್ರ ನದಿ ದಂಡೆಯಲ್ಲಿರುವ ತಾಲೂಕಿನ ಗ್ರಾಮಗಳಿಗೆ ಗ್ರಾಮಕ್ಕೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ತಹಶೀಲ್ದಾರ್ ದಯಾನಂದ್ ಪಾಟೀಲ್ ತಿಳಿಸಿದ್ದಾರೆ.

ಕಂದಾಯ ಪರಿವೀಕ್ಷಕರಾದ ಮಹಮ್ಮದ್ ಸಾದಿಕ್, ವೆಂಕಟೇಶ ಪಾಟೀಲ್, ರಾಜೇಂದ್ರದೊರೆ, ಗ್ರಾಮಲೆಕ್ಕಾಧಿಕಾರಿಗಳು, ಗ್ರಾ.ಪಂ. ಪಿ.ಡಿ.ಒ.ಗಳು ನದಿ ತೀರದ ಗ್ರಾಮಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.

Leave a Comment