ತುಂಗಭದ್ರ ಜಲಾಶಯ ಅರ್ಧ ಭರ್ತಿ

ಬಳ್ಳಾರಿ, ಜು.11: ತುಂಗಭದ್ರ ಜಲಾಶಯ ಇಂದಿಗೆ ಬರೋಬ್ಬರಿ ಅರ್ಧ ಭರ್ತಿಯಾಗಿದೆ. ಜಲಾಶಯದ ಸಾಮರ್ಥ್ಯ 133 ಟಿಎಂಸಿ ಇದ್ದರೂ ಅದರಲ್ಲಿ ಹೂಳು ತುಂಬಿರುವುದರಿಂದ ಈಗ ಅದರ ಸಾಮರ್ಥ್ಯ 100.83 ಗೆ ಇಳಿದಿದೆ. ಸದ್ಯ ಜಲಾಶಯದಲ್ಲಿ 50.073 ಟಿಎಂಸಿ ನೀರು ಸಂಗ್ರಹವಾಗಿರುವುದರಿಂದ. ಜಲಾಶಯ ಅರ್ಧ ಭರ್ತಿಯಾದಂತಾಗಿದೆ.

ಜಲಾಶಯದ ಗರಿಷ್ಟ ಮಟ್ಟ 1633 ಅಡಿ ಇದ್ದು ಇಂದು 1616.83 ಅಡಿಗೆ ತಲುಪಿದೆ. ಜಲಾಶಯ ಭರ್ತಿಯಾಗಲು ಇನ್ನು 16 ಅಡಿ ನೀರು ಬರಬೇಕಿದೆ. ಇಂದು ಜಲಾಶಯಕ್ಕೆ 45 ಸಾವಿರದ 724 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 160 ಕ್ಯೂಸೆಕ್ಸ್ ಮಾತ್ರ ನೀರು ಹೊರ ಬಿಡಲಾಗುತ್ತಿದೆ.

ಜಲಾಶಯದ ಜಲಾನಯನ ಪ್ರದೇಶದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ನಿನ್ನೆಯಿಂದ ಹೆಚ್ಚಾಗಿದೆ. ಕಳೆದ ಎರಡು ದಿನಗಳಲ್ಲಿ ಜಲಾಶಯಕ್ಕೆ 8 ಟಿಎಂಸಿ ನೀರು ಹರಿದು ಬಂದಿದೆ.

ಜಲಾಶಯದ ಎಡ ಹಾಗು ಬಲದಂಡೆ ಕೆಳ ಮತ್ತು ಮೇಲ್ಮಟ್ಟದ ಕಾಲುವೆಗಳಿಗೆ ನೀರು ಬಿಡುವ ಕುರಿತು ಈ ತಿಂಗಳ 16 ರಂದು ಮುನಿರಾಬಾದ್‍ನಲ್ಲಿ ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ.

Leave a Comment