ತೀರ್ಪು ಆಧರಿಸಿ ಬಿಜೆಪಿ ನಡೆ

ಬೆಂಗಳೂರು, ಸೆ. ೨೩- ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ತೀರ್ಪು ಆಧರಿಸಿ ಬಿಜೆಪಿ ಮುಂದಿನ ಹೆಜ್ಜೆಯಿಡಲಿದೆ. ತೀರ್ಪು ಹೊರ ಬರುವವರೆಗೂ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಮತ್ತು ಐ.ಟಿ. ಬಿ.ಟಿ. ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಇಂದಿಲ್ಲಿ ತಿಳಿಸಿದರು.
ನಗರದಲ್ಲಿ ನಡೆದ ಸಮಾರಂಭದವೊಂದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಊಹಿಸಿ ಮಾತನಾಡುವುದು ಸರಿಯಲ್ಲವೆಂದು ಹೇಳಿದರು.
ಸುಪ್ರೀಂ ಕೋರ್ಟ್ ನಿಂದ ಯಾವುದೇ ತೀರ್ಪು ಹೊರಬಿದ್ದರೂ ಅನರ್ಹ ಶಾಸಕರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವರ ಅಳಿವು- ಉಳಿವು ಅವಲಂಬಿತವಾಗಿರುತ್ತದೆ. ಅವರು ತೆಗೆದುಕೊಳ್ಳುವ ನಿರ್ಧಾರ ಅವರಿಗೆ ಬಿಟ್ಟದ್ದು ಎಂದು ಹೇಳಿದರು.
ಅನರ್ಹ ಶಾಸಕರ ವಿಚಾರದಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ಆತಂಕ, ಗೊಂದಲವಿಲ್ಲ ಎಂದು ಹೇಳಿದ ಉಪಮುಖ್ಯಮಂತ್ರಿ ಅವರು 15 ಉಪ ಚುನಾವಣೆಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಎಲ್ಲ ಕ್ಷೇತ್ರಗಳಲ್ಲೂ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರ ಮಗನಿಗೆ ಬಿಜೆಪಿಯಿಂದ ಟಿಕೆಟ್ ನೀಡುವ ಬಗ್ಗೆ ಸಂಸದ ಬಿ.ಎನ್. ಬಚ್ಚೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯೇ ಸಿದ್ಧವಾಗಿಲ್ಲ. ಅವರಿಗೆ ಟಿಕೆಟ್ ನೀಡಲಾಗಿದೆ, ಇವರಿಗೆ ಟಿಕೆಟ್ ನೀಡಲಾಗಿದೆ ಎಂಬ ಕಲ್ಪನೆ ಅನಗತ್ಯ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಇಂಡಿಯಾ ಡಿ ಡಾಕ್ಟೀಕ್ಸ್ ಸಂಸ್ಥೆಯು ಆಯೋಜಿಸಿದ್ದ ಶಿಕ್ಷಣ ಮತ್ತು ಕೌಶಲ್ಯ ಕುರಿತ ಏಷ್ಯಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ರಾಜ್ಯದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬಯಸಿದ್ದ ಶಿಕ್ಷಣ ದೊರೆಯುತ್ತಿಲ್ಲ. ಶಿಕ್ಷಣದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಆಗಿಲ್ಲವೆಂದು ಹೇಳಿದರು.
ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸವಾಲು ಆಗಿ ಪರಿಣಮಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಅವಿಷ್ಕಾರ, ಚಿಂತನೆ, ಬದಲಾವಣೆಗಳು, ಸುಧಾರಣೆಗಳನ್ನು ತರುವಲ್ಲಿ ಶಿಕ್ಷಣ ತಜ್ಞರ ಜೊತೆಗೆ ಶಿಕ್ಷಕರು ಕೂಡ ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು.
ಶಿಕ್ಷಕರಿಗೆ ಶಿಕ್ಷಣ ನೀತಿಯನ್ನು ತರುವ ಮೂಲಕ ಈ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಲಭಿಸುವಂತೆ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು. ರಾಜ್ಯ ಸರ್ಕಾರಕ್ಕೆ ಯಾವುದೇ ಹಣಕಾಸು ಹೊರೆ ಆಗದಂತೆ ಕೇಂದ್ರ ನೀತಿ ಆಯೋಗ ಅಲ್ಲದೇ ಕೆಲ ಸಂಘ ಸಂಸ್ಥೆಗಳಿಂದ ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರದಲ್ಲಿ ಇರುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಹಾಗಾಗ್ಗೆ ಸಮ್ಮೇಳನಗಳನ್ನು ನಡೆಸಿ ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.
ಸಮಾರಂಭದಲ್ಲಿ ಇಂಡಿಯಾ ಡಿ ಡಾಕ್ಟೀಕ್ಸ್ ಅಸೋಸಿಯೇಷನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದಿತ್ಯ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.

Leave a Comment