ತಿರುಗಿಬಿದ್ದ ರಾಧಿಕಾ

ಬಾಲಿವುಡ್ ನಟಿ ರಾಧಿಕಾ ಆಪ್ಟೆ “ಪ್ರರ್ಚ್ಡ್”ಚಿತ್ರದಲ್ಲಿ ಕಾಣಿಸಿಕೊಂಡ “ಸೆಕ್ಸ್” ವಿಡಿಯೋ ಲೀಕ್ ಆಗುತ್ತಿದ್ದಂತೆ ಬಾಲಿವುಡ್ ತುಂಬೆಲ್ಲಾ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ ಬಾರೀ ವಿವಾದವನ್ನು ಸೃಷ್ಟಿ ಮಾಡಿದೆ.

ಬೇರೆಯವರ ಬೆತ್ತಲೆ ದೇಹವನ್ನು ನೋಡುವ ಮೊದಲು ಕನ್ನಡಿಯ ಮುಂದೆ ನಿಂತು ಮೊದಲು ನಿಮ್ಮ ಬೆತ್ತಲೆ ದೇಹವನ್ನು ನೋಡಿಕೊಳ್ಳಿ. ಆಗ ಇತರರ ಬೆತ್ತಲೆ ಇಲ್ಲವೇ ಹಸಿಬಿಸಿ ದೃಶ್ಯಗಳ ಬಗ್ಗೆ ಮಾತನಾಡುವುದರ ಬಗ್ಗೆ ಚರ್ಚೆ ಮಾಡೋಣ ಎಂದು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಹೇಳಿದ್ದಾರೆ.

ಚಿತ್ರದಲ್ಲಿ ಲೀಕ್ ಆಗಿರುವ ವಿಡಿಯೋ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆ ಸಾರಿ ನಿಮ್ಮ ಪ್ರಶ್ನೆ ಹಾಸ್ಯಾಸ್ಪದವಾಗಿದೆ ಎಂದು ಪ್ರಶ್ನೆ ಕೇಳಿದವರ ವಿರುದ್ದವೇ ತಿರುಗಿ ಬಿದ್ದಿದ್ದಾರೆ ರಾಧಿಕಾ ಆಪ್ಟೆ.
ವಿವಾದ ಮಾಡುವುದು ನೀವೇ. ಚಿತ್ರದ ಕ್ಲಿಪ್ ಬೇರೆಯವರಿಗೆ ಶೇರ್ ಮಾಡುತ್ತೀರಾ. ಹಾಗಾಗಿ ವಿವಾದಕ್ಕೆ ನೀವೇ ಕಾರಣ ಎಂದು ಪತ್ರಕರ್ತರ ವಿರುದ್ದ ತಿರುಗಿ ಬಿದ್ದಿದ್ದಾಳೆ.
ಅಷ್ಟಕ್ಕೂ ಪತ್ರಕರ್ತರೇನು ಇಲ್ಲದ ವಿಷಯದ ಬಗ್ಗೆ ಪ್ರಶ್ನೆ ಕೇಳಿರಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ “ಪ್ರರ್ಚ್ಡ್” ಚಿತ್ರದಲ್ಲಿ ಆದಿಲ್ ಹುಸೇನ್ ಜೊತೆ ರಾಧಿಕಾ ಆಪ್ಟೆ ಸೆಕ್ಸ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಭಾಗಿಯಾದ ವಿಡಿಯೋ ಕ್ಲಿಪ್ ಬಗ್ಗೆ ಏನನ್ನುತ್ತೀರಾ ಎಂದು ಪ್ರಶ್ನಿಸಿದ್ದೇ ತಡ, ಚಿತ್ರದಲ್ಲಿ ನಟಿಸಿರುವುದಕ್ಕಿಂತ ಹೆಚ್ಚಾಗಿ ಆ ಒಂದು ಸೀನ್ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತೀರಾ. ಅದುವೇ ನಿಮ್ಮ ತಲೆಯಲ್ಲಿ ತುಂಬಿಕೊಂಡಿದೆ. ವಿವಾದ ಮಾಡುವುದನ್ನು ಬಿಟ್ಟು ನಿಮಗೆ ಬೇರೆ ಏನೂ ಗೊತ್ತಿಲ್ಲ. ಎಲ್ಲೆ ಪ್ರಚಾರ ಇಲ್ಲವೇ ಸಂದರ್ಶನಕ್ಕೆ ಹೋದರೆ ಎಲ್ಲರೂ ಅದೇ ಪ್ರಶ್ನೆ ಕೇಳುತ್ತಾರೆ ನಾನು ಎಷ್ಟು ಬಾರಿ ಅದಕ್ಕೆ ಉತ್ತರ ಕೊಡುವುದು ಎಂದು ಮರಳಿ ಪ್ರಶ್ನಿಸಿದ್ದಾರೆ.
ನಾನೊಬ್ಬ ಕಲಾವಿದೆ. ಚಿತ್ರಕ್ಕೆ ಇಲ್ಲವೇ ಸನ್ನಿವೇಶಕ್ಕೆ ಬೇಕು ಎಂದಾದರೆ ಸೆಕ್ಸ್ ದೃಶ್ಯಗಳಲ್ಲಿ ನಟಿಸುತ್ತೇನೆ. ಎಲ್ಲವನ್ನೂ ಸಂಕುಚಿತವಾಗಿ ನೋಡುವುದನ್ನು ಬಿಡಿ. ಒಂದು ಸಿನಿಮಾವಾಗಿ ನೀವು ಯೋಚನೆ ಮಾಡಿದರೆ ಈ ರೀತಿಯ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದಿದ್ದಾರೆ.
ಚಿತ್ರದಲ್ಲಿ ಹಸಿ ಬಿಸಿಯಾಗಿ ನಟಿಸುವುದಕ್ಕೆ ಅಥವಾ ಆ ರೀತಿಯ ವಿಡಿಯೋ ಲೀಕ್ ಆಗಿರುವುದಕ್ಕೆ ನನಗೆ ಯಾವುದೇ ರೀತಿಯ ನಾಚಿಕೆ ಇಲ್ಲ. ಅಂಜಿಕೆಯೂ ಇಲ್ಲ. ನಾನು ಕಲಾವಿದೆ. ಆ ರೀತಿಯ ದೃಶ್ಯಗಳಲ್ಲಿ ನಟಿಸಿರುವುದಕ್ಕೆ ಹೆಮ್ಮೆ ಇದೆ. ಬೇರೆಯವರ ಬೆತ್ತಲೆ ದೇಹವನ್ನು ನೋಡಲು ಬಯಸುವ ಮಂದಿ ಮೊದಲ ಕನ್ನಡಿಯ ಮುಂದೆ ನಿಂತುಕೊಂಡು ನಿಮ್ಮ ಬೆತ್ತಲೆ ಫೊಟೋ ನೋಡಿಕೊಳ್ಳಿ. ಆ ನಂತರ ಚಿತ್ರದಲ್ಲಿ ನಟಿಸಿರುವ ಹಸಿ ಬಿಸಿ ದೃಶ್ಯ ಇಲ್ಲವೆ ಸೆಕ್ಸ್ ಸನ್ನಿವೇಶಗಳ ಬಗ್ಗೆ ಮಾತನಾಡೋಣ.
ನಿಮ್ಮ ಬೆತ್ತಲೆ ದೇಹ ನೋಡಿಕೊಳ್ಳಲು ನಿಮಗೆ ಅಸಹ್ಯವಾಗುತ್ತದೆ. ಆದರೆ ಬೇರೆಯವರ ಬೆತ್ತಲೆ ದೇಹ ನೋಡಲು ನಿಮಗೆ ಖುಷಿಯಾಗುತ್ತದೆಯೇ? ಇಂತಹ ನಿಮ್ಮ ಧೋರಣೆ ಬದಿಗೆ ಸರಿಸಿ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ.

Leave a Comment