ತಿಪಟೂರು ಬಳಿ ಭೀಕರ ಅಪಘಾತ: ಮೂವರ ದುರ್ಮರಣ

ತಿಪಟೂರು, ಡಿ. ೭- ಅಪರಿಚಿತ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿರುವ ಧಾರುಣ ಘಟನೆ ತಾಲ್ಲೂಕಿನ ಮಾದಿಹಳ್ಳಿ ತಿರುವಿನಲ್ಲಿ ಇಂದು ಮುಂಜಾನೆ 4.30ರಲ್ಲಿ ನಡೆದಿದೆ.

ಮೃತಪಟ್ಟವರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಬಾರದೂಂರು ಗ್ರಾಮದ ಪ್ರವೀಣ್ (24), ಗಿರೀಶ್ (25) ಹಾಗೂ ಯೋಗಿಶ್ (25) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇವರೆಲ್ಲ ಸ್ವಗ್ರಾಮ ಬಾರದೂಂರಿನಿಂದ ನಾಗಮಂಗಲ ಸಮೀಪದ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಮಾದಿಹಳ್ಳಿ ತಿರುವಿನ ಬನ್ಸಾರ್ ಡಾಬಾ ಬಳಿ ಅಪರಿಚಿತ ವಾಹನಕ್ಕೆ ಕಾರು ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಅಪರಿಚಿತ ವಾಹನಕ್ಕೆ ಕಾರು ಅಪ್ಪಳಿಸಿದ್ದರಿಂದ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ.

ಘಟನೆಯ ಸುದ್ದಿ ತಿಳಿದ ಕೂಡಲೇ ತಿಪಟೂರು ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣರಾಜು, ಸಬ್‌ಇನ್ಸ್‌ಪೆಕ್ಟರ್ ಕಾಂತರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರಿನಲ್ಲಿ ಸಿಲುಕಿಕೊಂಡಿದ್ದ ಶವಗಳನ್ನು ಹೊರತೆಗೆಯುವುದರ ಜತೆಗೆ, ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದ್ದಾರೆ.

ಈ ಸಂಬಂಧ ತಿಪಟೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment