ತಿದ್ದುಪಡಿ ಮಸೂದೆ ವಿರೋಧಿಸಿ, ಬಳ್ಳಾರಿಯಲ್ಲಿ ವಕೀಲರ ಪ್ರತಿಭಟನೆ

ಬಳ್ಳಾರಿ, ಏ.21: ವಕೀಲರ ಹಕ್ಕುಗಳಿಗೆ ಚ್ಯುತಿ ತರುವ, ವಕೀಲರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಹಾಗೂ ವಕೀಲರ ವೃತ್ತಿಗೆ ಸಂಬಂಧವಿಲ್ಲದವರು, ವಕೀಲರ ಸಂಘಟನೆಗಳ ಸದಸ್ಯರಾಗಲು ಅವಕಾಶ ಕಲ್ಪಿಸಿರುವ ಕಾನೂನು ಆಯೋಗದ ವರದಿ ಮತ್ತು ಅದರೊಂದಿಗಿನ ವಕೀಲರ (ತಿದ್ದುಪಡಿ) ಮಸೂದೆ-2017 ಅನ್ನು ವಿರೋಧಿಸಿ, ತಿದ್ದು ಪಡಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಬಳ್ಳಾರಿಯಲ್ಲಿಂದು ವಕೀಲರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನಿ, ಕಾನೂನು ಸಚಿವರಿಗೆ ಮನವಿ ಪತ್ರ ಕಳುಹಿಸಿಕೊಟ್ಟರು.

ವಕೀಲರ (ತಿದ್ದುಪಡಿ) ಕಾಯಿದೆ ವಿರೋಧಿಸಿ ಭಾರತೀಯ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತೆಗೆದುಕೊಂಡ ಒಕ್ಕೊರಲಿನ ನಿರ್ಣಯದಂತೆ. ಕರೆ ನೀಡಿರುವ ಪ್ರತಿಭಟನೆಯಂತೆ ಬಳ್ಳಾರಿಯಲ್ಲಿಯೂ ಕೂಡಾ ವಕೀಲರ ಸಂಘದ ಆಶ್ರಯದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.

ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಎದುರು ಜಮಾಯಿಸಿದ ನೂರಾರು ಜನ ವಕೀಲರು ಕಾನೂನು ಆಯೋಗ ಸಲ್ಲಿಸಿದ ವರದಿ ಮತ್ತು ತಿದ್ದುಪಡಿ ಮಸೂದೆಯ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ಸೂಚಿಸಿದರು.

ಆನಂತರ ವಕೀಲರು ಬೈಕ್ ಱ್ಯಾಲಿಯ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಮನವಿ ಪತ್ರ ಸಲ್ಲಿಸಿ, ವಕೀಲರ (ತಿದ್ದುಪಡಿ) ಮಸೂದೆ-2017 ಅನ್ನು ತಿರಸ್ಕರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹ ಪಡಿಸಿದ್ದಾರೆ. ಅಂತೆಯೇ ಬಳ್ಳಾರಿಯ ಲೋಕಸಭಾ ಸದಸ್ಯರಾದ (ಸಂಸದರಾದ) ಬಿ.ಶ್ರೀರಾಮುಲು ಅವರಿಗೂ ಕೂಡಾ ಈ ಕುರಿತಂತೆ ಮನವಿ ಪತ್ರ ಸಲ್ಲಿಸಿದರು.

ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಬದರಿನಾಥ್, ಕಾರ್ಯದರ್ಶಿಗಳಾದ ಜಿ.ಎಂ.ರವಿರಾಜಶೇಖರರೆಡ್ಡಿ ಮತ್ತು ಇತರೆ ಪ್ರಮುಖರು ಈ ಸಂದರ್ಭದಲ್ಲಿ ಮಾತನಾಡಿ, ಉದ್ದೇಶಿತ ಮಸೂದೆಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ವಿವರಿಸಿದರು.
ವಕೀಲರ ಸಂಘದ ಹಿರಿಯ ಮತ್ತು ಕಿರಿಯ ಸದಸ್ಯರು, ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Comment