’ತಿಥಿ’ ಛಾಯೆಯ ಹಳ್ಳಿ ಪಂಚಾಯಿತಿ

ಚಿತ್ರ; ಹಳ್ಳಿ ಪಂಚಾಯಿತಿ
ನಿರ್ದೇಶನ; ಜಿ. ಉಮೇಶ್
ನಿರ್ಮಾಣ; ಪ್ರೇಮ ಯುವರಾಜ್
ತಾರಾಬಳಗ; ಗೀತಾ, ಸಹನಶ್ರೀ, ಸೆಂಚುರಿಗೌಡ, ಗಡ್ಡಪ್ಪ, ಅಭಿ
ತಿಥಿ ಚಿತ್ರ ಗಳಿಸಿದ ಖ್ಯಾತಿ ಅದೇ ಜಾಡಿನಲ್ಲೆ ಅನೇಕ ಚಿತ್ರಗಳು ತಯಾರಾಗಲು ಕಾರಣವಾಗಿದೆ. ‘ಹಳ್ಳಿ ಪಂಚಾಯಿತಿ’ಯೂ ಅದೇ ಛಾಯೆಯಲ್ಲಿರುವ ಚಿತ್ರ ಮಂಡ್ಯ ಕಡೆಯ ಭಾಷೆ ಮತ್ತು ಅಲ್ಲಿಯ ಹಳ್ಳಿ ಬದುಕನ್ನು ಆದರ್ಶಗಳ ಜೊತೆಗೆ ತೀರಾ ನೈಜವಾಗಿ ಚಿತ್ರಿಸಿರುವ ಚಿತ್ರ.
ತಿಥಿ ಖ್ಯಾತಿಯ ಸೆಂಚುರಿ ಗೌಡ, ಗಡ್ಡಪ್ಪ ಮತ್ತು ಅಭಿ ಇಲ್ಲಿಯೂ ಮಂಡ್ಯ ಭಾಷೆಯ ಜೊತೆಗೆ ನೈಜವಾಗಿ ಕಾಣಿಸಿಕೊಂಡಿದ್ದಾರೆ. ಒಂದೇ ಮುಖ್ಯ ವ್ಯತ್ಯಾಸವೆಂದರೆ ದ್ವಂದ್ವಾರ್ಥದ ಸಂಭಾಷಣೆ ಇಲ್ಲ. ಅವರುಗಳ ನಟನೆಗಿಂತ ಆಡುವ ಮಾತುಗಳೇ ಹೆಚ್ಚು ರಂಜಿಸುತ್ತದೆ. ಸೆಂಚುರಿಗೌಡರ ಕೀರಲು ಧ್ವನಿಯ ಬುದ್ಧಿವಾದ ಮತ್ತು ಗಡ್ಡಪ್ಪನ ದಾರ್ಶನಿಕ ಮಾತುಗಳು ಹಳ್ಳಿ ಪಂಚಾಯ್ತಿ ಚಿತ್ರವನ್ನು ಬಹುತೇಕ ಕಟ್ಟಿಕೊಟ್ಟಿದೆ. ಬಹಳ ವರ್ಷಗಳ ನಂತರ ಗೀತಾ ಅವರು ತಮ್ಮ ಚಿಕ್ಕ ಪಾತ್ರಕ್ಕೆ ಅದೇ ಉತ್ತಮ ಅಭಿನಯ ನೀಡಿದ್ದಾರೆ. ಆದರೆ ಎತ್ತರದ ನಿಲುವಿನ ಬಿಳುಪು ಮೈ ಬಣ್ಣದ ಅವರು ಭೂಮಿ ಉಳುಮೆ ಮಾಡುವ ಅದೂ ಕಷ್ಟದ ಬದುಕಿನ ಹಳ್ಳಿ ಮಹಿಳೆಯಂತೆ ಕಾಣಿಸುವುದಿಲ್ಲ.
ಪಂಚಾಯ್ತಿ ಸೇರುವಂತೆ ಹಳ್ಳಿಯಲ್ಲಿ ಡಂಗೂರ ಸಾರಲಾಗುತ್ತದೆ ಹಳ್ಳಿಯವರೆಲ್ಲಾ ಸೇರುತ್ತಾರೆ. ಆದರೆ ಪಂಚಾಯ್ತಿಯ ಮುಖ್ಯಸ್ಥರು ಪಂಚಾಯ್ತಿ ಕರೆದಿರುವುದಿಲ್ಲ ಯಾರು ಪಂಚಾಯ್ತಿ ಕರೆದಿದ್ದಾರೆಂದು ನೆರೆದಿದ್ದ ಜನರನ್ನೇ ಕೇಳಿದಾಗ ಲಾಯರ್ ತಿಮ್ಮೇಗೌಡನ ಮಗಳು ರಾಣಿ ಮುಂದೆ ಬರುತ್ತಾಳೆ. ತಾನು ಮತ್ತು ರಾಜ ಪ್ರೀತಿಸುತ್ತಿದ್ದು ತಮ್ಮಿಬ್ಬರ ಮದುವೆ
ಮಾಡಿಸಲು ಕೇಳುತ್ತಾಳೆ. ತಿಮ್ಮೇಗೌಡ ಹಳ್ಳಿಯ ಗುಂಡ್‌ಹೈಕ್ಳುಗಳಲ್ಲಿ ಒಬ್ಬನಾದ ರಾಜನಿಗೆ ಕೊಡುವುದಿಲ್ಲವೆಂದು ಹಠ ಹಿಡಿಯುತ್ತಾನೆ. ಆದರೆ ಊರಿನವರಿಗೆ ಮೋಸ ಮಾಡುವ ತಿಮ್ಮೇಗೌಡನ ಮಾತಿಗಿಂತ ಗೌರವಸ್ಥೆ ರಾಜು ತಾಯಿಗೆ(ಗೀತಾ) ಮತ್ತು ಪಂಚಾಯ್ತಿ ಮುಖ್ಯಸ್ಥನಾದ ರಾಮೇಗೌಡನಿಗೆ ಗೌರವ ಕೊಟ್ಟು ಇಬ್ಬರಿಗೆ ಮದುವೆ ಮಾಡುವಂತೆ ಪಂಚಾಯ್ತಿ ತೀರ್ಮಾನವಾಗುತ್ತದೆ. ಈ ಪಂಚಾಯ್ತಿ ಕರೆಯಲು ರಾಣಿ ಮತ್ತು ರಾಜ ಬೆನ್ನಿಗೆ ನಿಂತಿರುವ ಶಿಕ್ಷಕಿ ಹಳ್ಳಿಯ ಸುಧಾರಣೆಗೆ ಪ್ರಯತ್ನಿಸುತ್ತಿರುತ್ತಾಳೆ. ಇದಕ್ಕಾಗಿ ಶಿಕ್ಷಕಿಯ ಮೇಲೆ ದ್ವೇಷ ಸಾಧಿಲು ಮುಂದಾಗುವ ರಾಮೇಗೌಡ ಅವಳ ಕೊಲೆ ಮಾಡಿಸಲು ಪ್ರಯತ್ನಿಸುತ್ತಾನೆ. ಇದರಿಂದಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಡೆಯುವ ಹಳ್ಳಿ ಪಂಚಾಯ್ತಿಯಲ್ಲಿ ಮುಖ್ಯಸ್ಥರು ರಾಮೇಗೌಡನನ್ನು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ಶಿಕ್ಷಕಿ ಕ್ಷಮಿಸುವಂತೆ ಹೇಳುವ ಜೊತೆಗೆ ಹಳ್ಳಿ ಪಂಚಾಯ್ತಿ ತೀರ್ಮಾನ ಮತ್ತು ಸಹಬಾಳ್ವೆಯ ಮಹತ್ವವನ್ನು ಸಾರುತ್ತಾಳೆ ಅಲ್ಲಿಗೆ ಚಿತ್ರ ಮುಕ್ತಾಯವಾಗುತ್ತದೆ.
ಹಳ್ಳಿಯಲ್ಲಿ ನಡೆಯುವ ಘಟನೆಗಳಲ್ಲೆ ಶಿಕ್ಷಣ, ಸ್ವಚ್ಛತೆ, ಹಳ್ಳಿಯ ಒಗ್ಗಟ್ಟು, ಯುವಕರು ಇರಬೇಕಾದ ರೀತಿ ಮುಂತಾದ ಬಗ್ಗೆ ಶಿಕ್ಷಕಿ ಆದರ್ಶ ಸಾರುತ್ತಾರೆ ಆ ಮೂಲಕ ಬದಲಾವಣೆಯಾಗುತ್ತದೆ. ಹಳ್ಳಿಯ ಘಟನೆಗಳನ್ನೇ ಆಧರಿಸಿ ಸ್ವತಃ ಕಥೆ ಬರೆದು ನಿರ್ಮಿಸಿ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರೇಮಾ ಯುವರಾಜ್ ಯಾರುಬೇಕಾದರು ಸಿನೆಮಾ ಮಾಡಬಹುದು ನಟಿಸಬಹುದಾದ ಈಗಿನ ಟ್ರೆಂಡ್‌ಗೆ ನಿದರ್ಶನವಾಗಿದ್ದಾರೆ.
-ಕೆ.ಬಿ. ಪಂಕಜ

Leave a Comment