ತಿಂಗಳಾಯ್ತು ತಿರುಗಿ ನೋಡಲಿಲ್ಲ ಜಿಲ್ಲಾ ಸಚಿವರು

ಎನ್.ವೀರಭದ್ರಗೌಡ
ಬಳ್ಳಾರಿ, ಸೆ.14: ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಎರಡುವರೆ ತಿಂಗಳ ನಂತರ ಈ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕವಾಯ್ತು ನಂತರ ಬಂದ ಅವರು 48 ತಾಸು ಜಿಲ್ಲೆಯಲ್ಲಿ ಇದ್ದು ಹೋದವರು ಮತ್ತೆ ಒಂದು ತಿಂಗಳಾಯ್ತು ಇತ್ತ ತಿರುಗಿನೋಡಿಲ್ಲ.

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಶಾಸಕರೇ ಆಯ್ಕೆಯಾಗಿದ್ದಾರೆ. ಅವರಲ್ಲಿ ಮೂರು ಜನ ಹ್ಯಾಟ್ರಿಕ್ ಸಾಧನೆ ಮಾಡಿದವರು, ಮತ್ತೊಬ್ಬರು ನಾಲ್ಕನೇ ಬಾರಿಗೆ ಶಾಸಕರಾದವರು ವಿಧಾನ ಪರಿಷತ್ ನ ಇಬ್ಬರು ಹಿರಿಯ ಸದಸ್ಯರಿದ್ದರೂ ಜಿಲ್ಲೆಯವರಿಗೆ ಸಚಿವ ಸ್ಥಾನದ ಭಾಗ್ಯ ದೊರೆಯಲಿಲ್ಲ. ಅದಕ್ಕಾಗಿ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆ ಉಸ್ತುವಾರಿ ಇದ್ದರೂ ಬಳ್ಳಾರಿಯ ಹೊಣೆಯನ್ನು ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೊರಿಸಿದರು.

ಕಳೆದ ಆಗಸ್ಟ್ 14ರಂದು ಸಂಜೆ ಬಳ್ಳಾರಿಗೆ ಬಂದ ಶಿವಕುಮಾರ್ ಅವರು ಸ್ವಾತಂತ್ರ್ಯ ಧ್ವಜಾರೋಹಣ, ತುಂಗಭದ್ರ ಜಲಾಶಯಕ್ಕೆ ಬಾಗಿನ ಅರ್ಪಣೆ, ವಿಮ್ಸ್ ನಲ್ಲಿ ಸಭೆ, ಹಂಪಿ ಉತ್ಸವ ಕುರಿತು ಸಿದ್ಧತಾ ಸಭೆ ಮತ್ತು ಪಕ್ಷದ ಕಾರ್ಯಕರ್ತರ ಮುಖಂಡರ ಸಭೆ ನಡೆಸಿ ಹೋದರು.

ಹೋಗುವ ಮುನ್ನ ವಿಮ್ಸ್ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಸರ್ವೆ ಮಾಡುವಂತೆ ಆದೇಶಿಸಿದ್ದರು. ಅದೂ ಈವರೆಗೆ ಕೈಗೂಡಿಲ್ಲ.

ಇನ್ನು ಸುದ್ದಿಗೋಷ್ಠಿ ನಡೆಸಿದಾಗ ಅಧಿಕಾರಿ, ನೌಕರರು ಎಲ್ಲರೂ ತಮ್ಮ ತಮ್ಮ ಹೆಡ್ ಕ್ವಾಟರ್ ನಲ್ಲೇ ವಾಸವಾಗಬೇಕು, ತಮ್ಮ ಕಛೇರಿ ಮುಂದೆ ತಮ್ಮ ವಿವರ ಇರುವಿಕೆ, ಪ್ರವಾಸ ಬಗ್ಗೆ ಮಾಹಿತಿ ಫಲಕ ಹಾಕಬೇಕೆಂದು ಸೂಚಿಸಿದ್ದರು. ಆದರೆ ಈವರೆಗೆ ಅಂತಹ ಬೆಳವಣಿಗೆ ಆದ ಬಗ್ಗೆ ಎಲ್ಲೂ ಕಾಣುತ್ತಿಲ್ಲ ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಶಿವಕುಮಾರ್ ಅವರಿಗೆ ಐಟಿ ಇ.ಡಿ ದಾಳಿಗಳ ಸಂಕಷ್ಟಗಳ ಮಧ್ಯೆ ಅವರು ಬಳ್ಳಾರಿ ಜಿಲ್ಲೆಯನ್ನು ಮರೆತಂತೆ ಇದೆ. ಸರ್ಕಾರ ರಚನೆಗೊಂಡು ನಾಲ್ಕು ತಿಂಗಳಾಗುತ್ತಾ ಬಂದಿದ್ದರೂ ಸಚಿವರಿಂದ ಪ್ರಗತಿ ಪರಿಶೀಲನೆ ಸಹ ನಡೆದಿಲ್ಲ. ಒಂದು ರೀತಿ ಇಲ್ಲಿ ಅಧಿಕಾರಿಗಳೇ ಎಲ್ಲವನ್ನು ನಿಭಾಯಿಸುವಂತೆ ಆಗಿದೆ.

ಇನ್ನೊಂದೆಡೆ ಪ್ರಭಾವಿ ಶಿವಕುಮಾರ್ ಅವರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಅಧಿಕಾರಿಗಳ ವರ್ಗಾವಣೆ, ಯೋಜನೆಗಳಿಗೆ ಹಣ ಮಂಜೂರಾತಿ ಮೊದಲಾದವುಗಳ ಬಗ್ಗೆ ತಮ್ಮ ಶಿಫಾರಸ್ಸುಗಳು ಜಾರಿಗೆ ಬರುತ್ತಿಲ್ಲ ಎಂಬ ಅಸಮಾಧಾನ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಮಡುಗಟ್ಟಿದೆ.

ಈ ಬಗ್ಗೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಕಂಪ್ಲಿ ಶಾಸಕ ಗಣೇಶ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಸ್ಥಾನಕ್ಕಾಗಿ ಹೋರಾಟ ನಡೆಸಿರುವ ನಾಗೇಂದ್ರ ಮತ್ತು ಆನಂದ್ ಸಿಂಗ್ ಅಸಮಾಧಾನದ ಜಾರಕಿಹೊಳಿ ಸಹೋದರರ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ವಾಸ್ತವದಲ್ಲಿ ಶಿವಕುಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗುವುದು ಜಿಲ್ಲೆಯ ಶಾಸಕರಿಗೆ ಸಮ್ಮತಿ ಇಲ್ಲ. ಆದರೆ ಅವರು ಪ್ರಭಾವಿ ಶಿವಕುಮಾರ್ ಅವರನ್ನು ಬೇಡ ಎಂದು ಬಹಿರಂಗವಾಗಿ ಹೇಳದೆ ಜಿಲ್ಲೆಯ ಶಾಸಕರಿಗೆ ಸಚಿವಸ್ಥಾನ ನೀಡಬೇಕು ಎಂದು ಪಱ್ಯಾಯ ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲೆಯ ಶಾಸಕರೇ ಸಚಿವರಾದರೆ ಸಹಜವಾಗಿ ಅವರಿಗೆ ಉಸ್ತುವಾರಿ ದೊರೆಯುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿದೆ.

ಒಂದಂತೂ ನಿಜ ಶಿವಕುಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಜಿಲ್ಲೆಯಲ್ಲಿ ಅವರ ಹಿಂಬಾಲಿತರಿಗೆ ಬಿಟ್ಟರೆ ಉಳಿದವರೆಲ್ಲಾ ತಮ್ಮೊಳಗಿನ ಅಸಮಾಧಾನ ಹೊರ ಹಾಕದೇ ವಿಷವನ್ನು ನುಂಗಿದ ನೀಲಕಂಠರಂತಿದ್ದಾರೆ. ಸಚಿವ ಶಿವಕುಮಾರ್ ಅವರು ಬಳ್ಳಾರಿಗೆ ಬರದೇ ದೂರ ಉಳಿದರೆ ಅದನ್ನು ಒಂದು ಅಸ್ತ್ರವಾಗಿ ಆಡಳಿತಾರೂಢ ಮತ್ತು ವಿರೋಧಿ ಶಾಸಕರೂ ಅಸ್ತ್ರವಾಗಿ ಬಳಸುವ ದಿನ ಹತ್ತಿರವಾಗಲಿದೆ.

Leave a Comment