ತಾ.ಪಂ ಕಚೇರಿ ಸಿಬ್ಬಂದಿಗೆ ಕೊರೊನಾ: ಸಿಬ್ಬಂದಿಯಲ್ಲಿ ಮನೆಮಾಡಿದ ಆತಂಕ

ಹುಬ್ಬಳ್ಳಿ, ಜೂ 30: ಇಲ್ಲಿನ ತಾಲೂಕು ಪಂಚಾಯಿತಿ ಸಿಬ್ಬಂದಿಯೋರ್ವರಿಗೆ ನಿನ್ನೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಮಿನಿ ವಿಧಾನಸೌಧದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಿನಿ ವಿಧಾನಸೌಧದ ಸಂಕೀರ್ಣದಲ್ಲಿಯೇ ತಾ.ಪಂ ಕಛೇರಿ ಇರುವುದರಿಂದ ಸಂಕೀರ್ಣದ ಎಲ್ಲ ಕಛೇರಿಗಳನ್ನು ಶುಚಿಗೊಳಿಸುವ ಕಾರ್ಯದಲ್ಲಿ ತಾಲೂಕಾಡಳಿತ ತೊಡಗಿಕೊಂಡಿದೆ.
ಅಲ್ಲದೆ ಇಂದು  ಕಛೇರಿಗಳಿಗೆ ಹಾಜರಾಗಲು ಬಂದಿದ್ದ ಕೆಲ ಸಿಬ್ಬಂದಿಗಳಿಗೆ ರಜೆ ನೀಡಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಯಿತು.
ನಿನ್ನೆ ತಾ.ಪಂ ಕಛೇರಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಡುತ್ತಿದ್ದಂತೆ ತಾ.ಪಂ ಕಛೇರಿಯನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಯಿತು.
ತಾ.ಪಂ ಕಛೇರಿಯಲ್ಲಿನ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದ್ದು, ಸದ್ಯ ಇವರನ್ನು ಕಿಮ್ಸ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತನ್ನ ಗೆಳೆಯನಿಗೆ ಕೊರೊನಾ ಸೋಂಕು ಇರುವ ಬಗ್ಗೆ ತಿಳಿದ ತಾ.ಪಂ ಸಿಬ್ಬಂದಿ ತಾನೂ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ನಂತರ ಇವರಿಗೂ ವರದಿ ಪಾಸಿಟಿವ್ ಬಂದಿತ್ತು. ವರದಿ ಬರುವವರೆಗೆ ಇವರು ಮನೆಯಲ್ಲಿಯೇ ಉಳಿದಿದ್ದರು ಎನ್ನಲಾಗಿದೆ. ಇವರ ಸಂಪರ್ಕ ಹೊಂದಿದ್ದ ಕೆಲವರ ಗಂಟಲು ದ್ರವ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Share

Leave a Comment