ತಾಲ್ಲೂಕಿನಲ್ಲಿ ಅಹಾರ ಅವಶ್ಯಕ ವಸ್ತುಗಳನ್ನು ಹಂಚುತ್ತಿರುವ ಸ್ಯಾನ್‌ ಸಿಟಿ ತಂಡ

ಮೈಸೂರು ಏ.6: ಕರೋನಾ ರೋಗದ ಭೀತಿಯಿಂದ ಲಾಕ್‌ಡೌನ್‌ ನಲ್ಲಿ ಸಿಲುಕೊಂಡಿರುವ ಮೈಸೂರು ನಗರ ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಜನರಿಗೆ ಬಿ.ಎಸ್‌ ವಿಶ್ವ ಕಾರ್ಯಪ್ಪ ಅವರ ನೇತೃತ್ವದ ಸ್ಯಾನ್‌ ಸಿಟಿ ತಂಡ ಅವಶ್ಯಕ ವಸ್ತುಗಳನ್ನು ಹಂಚುತ್ತಿದ್ದಾರೆ.
ಸ್ಥಿತಿವಂತರು ತಮಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಳ್ಳುವ ಶಕ್ತಿ ಉಳ್ಳವರ ಮೇಲೆ ಲಾಕ್‌ ಡೌನ್‌ ಅಷ್ಟು ಪರಿಣಾಮ ಬೀರಿಲ್ಲ. ಆದರೆ, ಆಯಾ ದಿನದ ಕೂಲಿಯನ್ನು ನಂಬಿಕೊಂಡು ಜೀವನ ಸಾಗಿಸುವ ಜನರ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರಿದೆ. ಇಂತಹ ಕಾರ್ಮಿಕರು, ಬೀದಿ ಬದಿಯಲ್ಲಿ ವಾಸಿಸುವವರು, ಅಶಕ್ತರು ಹಾಗೂ ಮನೆಯಿಂದ ಹೊರ ಬರಲಾಗದೆ ತೊಂದರೆಗೆ ಈಡಾಗಿರುವವರು ಮತ್ತು ಬಡವರ ದಿನ ನಿತ್ಯದ ಜೀವನಕ್ಕೆ ಅವಶ್ಯಕವಾಗಿರುವ ವಸ್ತುಗಳನ್ನು ಕೊಡುವುದರ ಮೂಲಕ ಬಿ.ಎಸ್‌ ವಿಶ್ವಕಾರ್ಯಪ್ಪ ನೇತೃತ್ವದ ಸ್ಯಾನ್‌ ಸಿಟಿ ತಂಡ ಮಾನವೀಯತೆ ಮೆರೆಯುತ್ತಿದೆ.
ಕಳೆದ 12 ದಿನಗಳಿಂದ ಮೈಸೂರು ನಗರ, ಬೆಂಗಳೂರು ನಗರ, ಮಂಡ್ಯ ಹಾಗೂ ಪರಿಯಾಪಟ್ಟಣ ತಾಲ್ಲೂಕಿನ ಹಲವಾರು ಪ್ರದೇಶಗಳಲ್ಲಿ ಅಗತ್ಯವಿರುವ ಸಾಮಗ್ರಿಗಳನ್ನು ಹಂಚಲಾಗುತ್ತಿದೆ. ಒಂದು ಕುಟುಂಬಕ್ಕೆ ಸುಮಾರು ಒಂದು ತಿಂಗಳಿಗೆ ಸಾಕಾಗುಷ್ಟು ಸಾಮಗ್ರಿಗಳನ್ನು ಈ ತಂಡ ವಿತರಣೆ ಮಾಡುತ್ತಿದೆ. ಆಹಾರ, ನೀರು, ಮಾಸ್ಕಗಳು, ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ, ಡಿಟರ್ಜೆಂಟ್‌ ಸೇರಿದಂತೆ ಅವಶ್ಯಕ ಸಾಮಗ್ರಿಗಳು ಜನರ ಕೈಸೇರಿಸುವಲ್ಲಿ ವಿಶ್ವ ಕಾರ್ಯಪ್ಪ ನೇತೃತ್ವದ ತಂಡ ಪ್ರಮುಖ ಪಾತ್ರವಹಿಸುತ್ತಿದೆ.
ಕೋವಿಡ್‌ 19 ರ ವಿರುದ್ದ ಹಗಲು ರಾತ್ರಿ ಎನ್ನದೆ ಹೋರಾಡುತ್ತಿರುವ ಪೋಲೀಸರಿಗೆ, ವೈದ್ಯರಿಗೆ ಮತ್ತು ತುಂಬಾ ಅವಶ್ಯಕತೆ ಇರುವ ಕುಟುಂಬಗಳಿಗೆ 10 ಸಾವಿರ ಮಾಸ್ಕ್‌, ಸ್ಯಾನಿಟೈಸರ್‌, ಟೂತ್‌ ಬ್ರಶ್‌, ಪೇಸ್ಟ್‌, ಡೇಟಾಲ್‌ ಸೋಪ್‌, ಮೆಡಿಸಿನ್ಸ್‌, ಸ್ಯಾನಿಟರಿ ಪ್ಯಾಡ್ಸ್‌, ಫಿನೈಲ್‌, ಟಾಯ್ಲೆಟ್‌ ಕ್ಲೀನರ್‌ ಸೇರಿದಂತೆ ನಿತ್ಯಬಳಕೆಯ ವಸ್ತುಗಳನ್ನು ವಿತರಿಸಲಾಗುತ್ತಿದೆ. ಇನ್ನೂ 10 ಸಾವಿರ ಮಾಸ್ಕ್‌ಗಳು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುವ ಕಾರ್ಯಭರದಿಂದ ಸಾಗಿದೆ.
ಕರೋನಾ ಮಾರಿ ಹಬ್ಬದಂತೆ ತಡೆಯುವ ಉದ್ದೇಶದಿಂದ ದೇಶದ ಸನ್ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ದೇಶವನ್ನು ಲಾಕ್‌ಡೌನ್‌ ಮಾಡುವ ಕರೆಯನ್ನು ನೀಡಿದ್ದು ಸ್ವಾಗತಾರ್ಹ. ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರು ಹಾಗೂ ಬಡವರ್ಗದ ಜನರ ಜೀವನ ಇದರಿಂದ ತೊಂದರೆಗೀಡಾಬಾರದು ಎನ್ನುವ ಉದ್ದೇಶದಿಂದ ಜೀವನಾವಶ್ಯಕ ವಸ್ತುಗಳನ್ನು ಹಂಚುವ ನಿರ್ಧಾರವನ್ನು ತಗೆದುಕೊಳ್ಳಲಾಯಿತು. ಸ್ಯಾನ್‌ ಸಿಟಿ ಸಂಸ್ಥೆ ರಾಜ್ಯದ ಅನೇಕ ನೈಸರ್ಗಿಕ ವಿಪತ್ತುಗಳ ಸಂಧರ್ಭದಲ್ಲೂ ಜನರ ಸಹಾಯಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಸ್ಯಾನ್‌ ಸಿಟಿ ಸಂಸ್ಥೆಯ ಮುಖ್ಯಸ್ಥರಾದ ಬಿ.ಎಸ್‌ ವಿಶ್ವಕಾರ್ಯಪ್ಪ ತಿಳಿಸಿದರು.

Leave a Comment