ತಾಲೂಕು ಕಚೇರಿಗೆ ದಿಡೀರ್

ಭೇಟಿ ನೀಡಿದ ಶಾಸಕ ಬಂಗೇರ
ಬೆಳ್ತಂಗಡಿ, ಮಾ.೧೪- ತಾಲೂಕು ಕಚೇರಿಯಲ್ಲಿ ಅಕ್ರಮ ಸಕ್ರಮ, ೯೪ಸಿ ಮತ್ತು ೯೪ಸಿಸಿ ಹಕ್ಕು ಪತ್ರ ನೀಡುವಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಕಡತಗಳನ್ನು ತಪ್ಪಿಸಿಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನಲೆಯಲ್ಲಿ ಶಾಸಕ ಕೆ. ವಸಂತ ಬಂಗೇರ ಅವರು ಮಂಗಳವಾರ ಬೆಳ್ತಂಗಡಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ಶನಿವಾರ ನಡೆಯುವ ಸಮಿತಿಯ ಸಭೆ ವೇಳೆಗೆ ಅಕ್ರಮ ಸಕ್ರಮ ಕಡತಗಳನ್ನೆಲ್ಲ ಹೊರತೆಗೆದು ಸಮಿತಿಯ ಮುಂದಿಡಬೇಕು. ೯೪ಸಿ ಹಾಗೂ ೯೪ ಸಿಸಿ ಯ ಸಿದ್ದವಾಗಿರುವ ಹಕ್ಕುಪತ್ರಗಳ ವಿತರಣೆಯಾಗಬೇಕು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಸ್ಥಳದಲ್ಲಿಯೇ ಕಡತಗಳ ವಿಲೇವಾರಿ ನಡೆಸಬೇಕು ಎಂದು ಸೂಚಿಸಿದ್ದಾರೆ. ಬೆಳ್ತಂಗಡಿ ಪಟ್ಟಣ ಪಂಚಾಯತಿನ ಸಭಾಭವನದಲ್ಲಿ ಮಂಗಳವಾರ ಅಕ್ರಮ ಸಕ್ರಮ ಸಮಿತಿಯ ಸಭೆ ನಿಗಧಿಯಾಗಿತ್ತು. ಅಕ್ರಮ ಸಕ್ರಮ ಕಡತಗಳು ಸಾಕಷ್ಟು ತಾಲೂಕು ಕಚೇರಿಯಲ್ಲಿ ನಾಪತ್ತೆಯಾಗಿರುವುದನ್ನು ಪತ್ತೆ ಹಚ್ಚುವಂತೆ ಹಾಗೂ ಇರುವ ಕಡತಗಳನ್ನು ಕೂಡಲೇ ವಿಲೇ ಮಾಡುವಂತೆ ಶಾಸಕರು ಕಳೆದ ವಾರವೇ ತಹಶೀಲ್ದಾರರಿಗೆ ಸೂಚಿಸಿದ್ದರು. ಇಂದಿನ ಸಭೆಗೆ ಹಾಜರಾಗುವಂತೆಯೂ ಸೂಚಿಸಿದ್ದರು. ಆದರೆ ಸಭೆಗೆ ತಹಶೀಲ್ದಾರರು ಹಾಜರಾಗಿರಲಿಲ್ಲ ಹಾಗೂ ಸಮಿತಿಯ ಮುಂದೆ ಕೇವಲ ಸೀಮಿತ ಕಡತಗಳು ಮಾತ್ರ ಇದ್ದವು. ಇದು ಶಾಸಕರನ್ನು ಕೆರಳಿಸಿತ್ತು. ಇದೇ ಸಂದರ್ಭದಲ್ಲಿ ಬಂದಿದ್ದ ಜನರೂ ತಾಲೂಕು ಕಚೇರಿಯ ಅವ್ಯವಹಾರಗಳ ಬಗ್ಗೆ ದೂರು ನೀಡಿದರು. ತಕ್ಷಣ ಶಾಸಕರು ಸಮಿತಿ ಸಭೆಯನ್ನು ಅರ್ಧದಲ್ಲಿಯೇ ನಿಲ್ಲಿಸಿ ತಾಲೂಕು ಕಚೇರಿಗೆ ತೆರಳಿ ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ತಾಲೂಕು ಕಚೇರಿಗೆ ಬರುತ್ತಿದ್ದಂತೆ ಹಕ್ಕುಪತ್ರಗಳನ್ನು ಪಡೆಯಲು ಬಂದಿದ್ದ, ಹಕ್ಕುಪತ್ರಗಳಿಗೆ ಅಲೆದಾಡಿ ಬೇಸತ್ತ ನೂರಾರು ಸಂಖ್ಯೆಯಲ್ಲಿದ್ದ ಫಲಾನುಭಾವಿಗಳೂ ತಾಲೂಕು ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದರು. ಈ ಬಗ್ಗೆ ಅಧಿಕಾರಿಗಳನ್ನು ಕರೆಸಿ ತಹಶೀಲ್ದಾರರ ಎದುರೇ ತರಾಟೆಗೆ ತೆಗೆದುಕೊಂಡ ಬಂಗೇರ ಅವರು, ಮೂರು ದಿನಗಳೊಳಗೆ ಉಳಿದಿರುವ ಕಡತಗಳನ್ನು ಹೊರತೆಗೆಯುವಂತೆ ಸೂಚಿಸಿದರು. ವಿವಿಧ ರೀತಿಯ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ ಸುಮಾರು ಹತ್ತು ಸಾವಿರದಷ್ಟು ಅರ್ಜಿಗಳು ವಿಲೇವಾರಿ ಆಗಲು ಬಾಕಿ ಇದ್ದು ಅದನ್ನು ಶನಿವಾರದೊಳಗೆ ವಿತರಿಸುವ ಕೆಲಸ ಆಗಬೇಕು ಎಂದರು. ಕೆಲ ಗ್ರಾಮ ಪಂಚಾಯಿತಿಯಲ್ಲಿ ಹಣ ಕೊಟ್ಟು ಮಾಡಿಸಿಕೊಂಡ ಹಕ್ಕುಪತ್ರಗಳ ವಿತರಣೆ ಆಗಿದೆ. ಆದರೆ ಎಲ್ಲಾ ದಾಖಲೆಗಳು ಸರಿಯಿದ್ದವರ ಕಡತ ಮಾಯವಾಗುತ್ತಿದೆ. ಬಡವರಿಗೆ ಹಕ್ಕುಪತ್ರ ನೀಡುವಂತೆ ಕಂದಾಯ ಸಚಿವರೂ ಹೇಳಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕುಮ್ಕಿ, ಗೋಮಾಳ, ಬಫರ್, ಪರಂಬೋಕುಗಳಿಗೆ ೯೪ ಸಿ ಮಂಜೂರಾತಿಗೆ ಅವಕಾಶವಿದ್ದರೂ ಅಧಿಕಾರಿಗಳು ಬಡವರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಫಾರಂ ೫೦ರ ಎಲ್ಲ ಕಡತಗಳು, ಅಕ್ರಮ-ಸಕ್ರಮ, ೯೪ಸಿ, ೯೪ಸಿಸಿ ಕಡತಗಳು ಶನಿವಾರ ನಡೆಯುವ ಸಭೆಗೆ ತರಬೇಕು. ಸಭೆಗೆ ಎಸಿಯವರನ್ನು ಬರಲು ಹೇಳುತ್ತೇನೆ. ಮೂರು ಹೋಬಳಿಯ ಕಂದಾಯ ನಿರೀಕ್ಷಕರು, ಎಲ್ಲಾ ಗ್ರಾಮಕರಣಿಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು ಎಂದು ತಹಶೀಲ್ದಾರ್ ಸಣ್ಣ ರಂಗಯ್ಯ ಅವರಿಗೆ ಸೂಚಿಸಿದರು. ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ ತಾಲೂಕು ಕಚೇರಿಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ್ದ ಜನರನ್ನು ಸಮಾಧಾನ ಪಡಿಸಿ ಕಚೇರಿಯಲ್ಲಿರುವ ಅರ್ಜಿಗಳನ್ನು ಪರಿಶೀಲಿಸಿ ಸರಿಪಡಿಸಿಕೊಡುವ ಭರವಸೆ ನೀಡಿದರು.ಶನಿವಾರ ನಡೆಯುವ ಸಭೆಯಲ್ಲಿ ಕಡತಗಳ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂದು ಎಲ್ಲರ ಸಮಸ್ಯೆಗೆ ಹಿರಿಯ ಅಧಿಕಾರಿಗಳ ಮೂಲಕ ಪರಿಹರಿಸಲಾಗುವುದು ಎಂದು ಶಾಸಕ ಬಂಗೇರ ಭರವಸೆ ನೀಡಿದರು.

Leave a Comment