ತಾರಕ್ಕೇರಿದ ಪ್ರಚಾರ : ಮತದಾರರ ಮನೆಗಳಿಗೆ ಎಡತಾಕುತ್ತಿರುವ 3 ಪಕ್ಷಗಳ ನಾಯಕರು

ಬೆಂಗಳೂರು, ಡಿ. ೧- ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ಇದೇ 5 ರಂದು ನಡೆಯಲಿರುವ ಉಪ ಚುನಾವಣೆಗೆ ವಿವಿಧ ಪಕ್ಷಗಳ ನಾಯಕರಿಂದ ಪ್ರಚಾರ ಭರಾಟೆ ತಾರಕಕ್ಕೇರಿದ್ದು, ಮತದಾರ ಪ್ರಭುಗಳ ಮನ ಗೆಲ್ಲಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

  • ಡಿ. 5 ವಿಧಾನಸಭೆ ಉಪ ಚುನಾವಣೆ
  •  ಬಹಿರಂಗ ಪ್ರಚಾರಕ್ಕೆ ಮೂರು ದಿನ ಬಾಕಿ
  •  ಮತದಾರರ ಮನಗೆಲ್ಲಲು ಮೂರು ಪಕ್ಷಗಳ ಕಸರತ್ತು
  •  ರಂಗೇರಿದ ಚುನಾವಣಾ ಅಖಾಡ
  •  ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ನಾಯಕರ ಹರಸಾಹಸ
  •  ಅನರ್ಹರಿಗೆ ಪಾಠ ಕಲಿಸಲು ಕಾಂಗ್ರೆಸ್, ಜೆಡಿಎಸ್, ಸರ್ಕಸ್

ಬಹಿರಂಗ ಪ್ರಚಾರಕ್ಕೆ ಕೇವಲ ಮೂರು ದಿನ ಬಾಕಿ ಉಳಿದಿರುವಂತೆ ಆಡಳಿತರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಾಯಕರು ಮತದಾರರ ಮನ ಗೆಲ್ಲಲು ಕ್ಷೇತ್ರಗಳ ಪ್ರದಕ್ಷಿಣೆ ಜೊತೆಗೆ ಹಳ್ಳಿ ಹಳ್ಳಿಗಳಿಗೆ ಸುತ್ತಿ ಮತ ಭೇಟೆಯಲ್ಲಿ ತೊಡಗಿದ್ದಾರೆ.

ಸರ್ಕಾರವನ್ನು ಉಳಿಸಿಕೊಂಡು ಸುಭದ್ರಪಡಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದು ಅಗ್ನಿ ಪರೀಕ್ಷೆಯಾಗಿದ್ದು, 15 ಕ್ಷೇತ್ರಗಳ ಪೈಕಿ ಕನಿಷ್ಠ 8 ರಿಂದ 10 ಸ್ಥಾನಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಇದನ್ನು ಮನಗಂಡಿರುವ ಯಡಿಯೂರಪ್ಪ ಅವರು ಈಗಾಗಲೇ ಎಲ್ಲ 15 ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದು, 2ನೇ ಸುತ್ತಿನ ಪ್ರಚಾರದಲ್ಲಿ ತೊಡಗಿದ್ದಾರೆ.

ವಿಶೇಷವಾಗಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳಾದ ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್ ಮತ್ತು ಕೆ. ಆರ್. ಪುರಂಗಳಲ್ಲಿ ಅನರ್ಹ ಶಾಸಕರಿಗೆ ಗೆಲುವು ತಂದುಕೊಡಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರ ಗೆಲುವು ನಿರೀಕ್ಷಿಸಿದಷ್ಟು ಸುಲಭವಲ್ಲ ಎಂಬುದರ ಹಿನ್ನಲೆಯಲ್ಲಿ ಈ ಕ್ಷೇತ್ರದತ್ತ ಬಿಜೆಪಿ ಮುಖಂಡರು ವಿಶೇಷ ಆಸಕ್ತಿ ತೋರಿದ್ದಾರೆ.
ಮಾತೃ ಪಕ್ಷಗಳಿಗೆ ಕೈಕೊಟ್ಟು ಬಿಜೆಪಿ ಸೇರಿರುವ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲೇಬೇಕು. ಯಾವುದೇ ಕಾರಣಕ್ಕೂ ಅವರಿಗೆ ಗೆಲುವು ಸಿಗದಂತೆ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹರಸಾಹಸ ಮಾಡುತ್ತಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್, ದಿನೇಶ್‌ಗುಂಡೂರಾವ್, ಈಶ್ವರ್‌ಖಂಡ್ರೆ, ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೂ ಸಹ ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಗಳ ಮೂಲಕ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಇದರ ನಡುವೆ ಅನರ್ಹ ಶಾಸಕರು ಮತ ಬೇಟೆಗೆ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಕೆಲವು ಗ್ರಾಮಗಳಲ್ಲಿ ಘೇರಾವ್ ಮಾಡಿರುವುದು ಅನರ್ಹ ಶಾಸಕರಿಗೆ ತಮ್ಮ ಗ್ರಾಮಗಳಿಗೆ ಪ್ರವೇಶವಿಲ್ಲ ಎಂಬ ಫಲಕಗಳನ್ನು ನೇತು ಹಾಕಿರುವುದರಿಂದ ಮುಜುಗರ ಸ್ಥಿತಿಗೆ ಒಳಗಾಗಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣೀಭೂತರಾಗಿರುವ ಅನರ್ಹ ಶಾಸಕರ ತ್ಯಾಗವನ್ನು ಕೃತಜ್ಞತಾ ಭಾವದಿಂದ ಸ್ಮರಿಸುತ್ತಿರುವ ಯಡಿಯೂರಪ್ಪ ಅವರು, ಅವರಿಗೆ ಗೆಲುವು ತಂದುಕೊಡಬೇಕೆಂದು ತಮ್ಮ ಇಳಿ ವಯಸ್ಸಿನಲ್ಲೂ ಹಗಲಿರುಳು ಶ್ರಮಿಸುತ್ತಿದ್ದರೇ, ಬಿಜೆಪಿ ನಿಷ್ಠರ ಮುನಿಸು, ಬಿಟ್ಟು ಬಂದ ಪಕ್ಷದ ಪ್ರತಿರೋಧ, ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿನ ದ್ವಂದ್ವ ಧೋರಣೆಗಳಿಂದ ಅನರ್ಹ ಶಾಸಕರು ತೀವ್ರ ಚಿಂತಾಕ್ರಾಂತರಾಗಿದ್ದಾರೆ.

ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರೂ ಅವರನ್ನು “ತಮ್ಮವರೇ ಎಂದು” ಭಾವಿಸುವ ಮನಸ್ಥಿತಿ ಬಿಜೆಪಿ ನಿಷ್ಠರಿಗಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಸೋಲಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿ, ಬಿಜೆಪಿಗೆ ಹಾರಿರುವ ಅನರ್ಹರ ಗೆಲುವಿಗೆ ಇದೇ ಮನಸ್ಥಿತಿ ತೊಡರುಗಾಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಷ್ಟೆಲ್ಲಾ ಸರ್ಕಸ್‌ಗಳು ನಡೆಯುತ್ತಿದ್ದರೂ ಮತದಾರರು ಮಾತ್ರ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಅಭ್ಯರ್ಥಿಗಳು ತೋರುವ ಆಸೆ ಆಮಿಷಗಳ ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಿರುವ ಮತದಾರರು ಅಂತಿಮವಾಗಿ ತಮ್ಮ ಒಲವು ಯಾರ ಪರ ಎಂಬುದನ್ನು ಡಿ. 5 ರಂದು ನಡೆಯಲಿರುವ ಮತದಾನದಲ್ಲಿ ವಿದ್ಯುನ್ಮಾನ ಯಂತ್ರಗಳ ಗುಂಡಿ ಒತ್ತುವ ಮೂಲಕ ದಾಖಲಿಸಲಿದ್ದಾರೆ.

Leave a Comment