ತಾಪಂ ಸಾಮಾನ್ಯ ಸಭೆ ಪಡಿತರ ಚೀಟಿ ವಿತರಣೆ ವಿಳಂಬಕ್ಕೆ ಸದಸ್ಯರು ಕಿಡಿ

ಹೊಸಪೇಟೆ, ಸೆ.7: ಸ್ಥಳೀಯ ತಾಲೂಕು ಪಂಚಾಯಿತಿ ವಿದ್ಯಾರಣ್ಯ ಸಭಾಂಗಣದಲ್ಲಿ ಗುರುವಾರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು.

ಸದಸ್ಯ ಗಾದಿಲಿಂಗಪ್ಪ ಮಾತನಾಡಿ, ಪಡಿತರ ಚೀಟಿ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ಇದರಿಂದ ಬಡ ಜನರಿಗೆ ತೊಂದರೆಯಾಗುತ್ತಿದೆ. ಆದರೆ, ಕಂದಾಯ ಅಧಿಕಾರಿಗಳು ಪ್ರತಿ ಸಭೆಗೂ ಗೈರುಹಾಜರಿ ಹಾಕುತ್ತಾರೆ. ಒಂದು ಪಡಿತರ ಚೀಟಿ ಕೊಡಿಸಲು ನಿಮ್ಮಿಂದ ಸಾಧ್ಯವಿಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕರಿಗೆ ಏನು ಉತ್ತರ ಕೊಡಬೇಕೆಂದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯನಿರ್ವಹಣಾಧಿಕಾರಿ ಟಿ.ವೆಂಕೋಬಪ್ಪ ಮಾತನಾಡಿ, ಕಂದಾಯ ಅಧಿಕಾರಿಗಳು ಕೂಡಲೇ ಸಭೆಗೆ ಬರಬೇಕು ಎಂದು ದೂರವಾಣಿ ಮೂಲಕ ಸೂಚಿಸಿದರು. ನಂತರ ಬಂದ ಆಹಾರ ಇನ್ಸ್ಪೆಕ್ಟರ್ ಅಜ್ಜಪ್ಪ, ಚುನಾವಣೆಯ ಹಿನ್ನೆಲೆಯಲ್ಲಿ ಆನ್ಲೈನ್ ಪ್ರಕ್ರಿಯೆ ಸ್ಥಗಿತವಾಗಿದೆ. ಹಾಗಾಗಿ ಪಡಿತರ ಚೀಟಿ ವಿತರಣೆಗೆ ವಿಳಂಬವಾಗಿದೆ. ಇನ್ನು 1203 ಅರ್ಜಿಗಳು ಬಾಕಿ ಇವೆ. ಕೂಡಲೇ ಇವುಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಸಿಡಿಪಿಒ ಪಂಪಾಪತಿ ಮಾತನಾಡಿ, ಇಲಾಖೆಯಲ್ಲಿ 22 ಲಕ್ಷ ರೂ. ಅನುದಾನ ಬಳಕೆಯಾಗದೆ ಹಾಗೇ ಉಳಿದಿದೆ. ಅದನ್ನು ಹೇಗೆ ಬಳಸಬೇಕು ಎಂದು ಈಗಾಗಲೇ ಸದಸ್ಯರಿಗೆ ತಿಳಿಸಲಾಗಿದೆ ಎಂದರು. ಇಲಾಖೆಯಿಂದ ಕಡಿಮೆ ಅನುದಾನ ನೀಡಲಾಗುತ್ತಿದ್ದು, ಯಾವುದಕ್ಕೂ ಪ್ರಯೋಜನ ಬರುವುದಿಲ್ಲ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಮಾತೃಪೂರ್ಣ ಯೋಜನೆ ಪ್ರಾರಂಭವಾಗಿ ಒಂದು ವರ್ಷವಾದರೂ ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ನೀರು ಸಿಗುತ್ತಿಲ್ಲ. ಕೈ ತೊಳೆಯಲು ನಲ್ಲಿಗಳು ಇಲ್ಲ. ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಸದಸ್ಯರು ದೂರಿದರು.

ಇಒ ವೆಂಕೋಬಪ್ಪ ಮಾತನಾಡಿ, ನಿರ್ಮಿತಿ ಕೇಂದ್ರದವರು ಕೆಲಸವನ್ನು ಸರಿಯಾಗಿ ಮಾಡಿಲ್ಲ. ಅವರಿಗೆ ನೋಟಿಸ್ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸದಸ್ಯ ಸಿ.ಡಿ.ಮಹಾದೇವ ಮಾತನಾಡಿ, ವರ್ಕ್ ಆರ್ಡರ್ ಮಾಡಿಕೊಂಡು ಮನೆಗಳು ಕಟ್ಟಲು ಅನುಮತಿ ನೀಡಲಾಗಿದೆ. ಈಗಾಗಲೇ ಬಹುತೇಕರು ಬುನಾದಿ ಕಟ್ಟಿಕೊಂಡಿದ್ದಾರೆ. ಆದರೆ, ಅವರಿಗೆ ಹಣ ಬಿಡುಗಡೆಯಾಗಿಲ್ಲ. ಈ ಕೂಡಲೇ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷ ತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಸ್.ಶಿವಮೂರ್ತಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಬಿ.ಎಸ್.ರಾಜಪ್ಪ ಇತರರಿದ್ದರು.

Leave a Comment