ತಾಕತ್ತಿದ್ದರೆ ನನ್ನನ್ನು ಬಂಧಿಸಲಿ: ಸಿಎಂಗೆ ಶೆಟ್ಟರ್ ಸವಾಲು

ಹುಬ್ಬಳ್ಳಿ, ಜ 12- ನಾನೋರ್ವ ಆರ್.ಎಸ್. ಎಸ್. ಕಾರ್ಯಕರ್ತ, ನಾನು ಉಗ್ರಗಾಮಿ ಅಂದರೆ ನನ್ನನ್ನು ತಾಕತ್ತಿದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಂಧಿಸಲಿ ಎಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಇಂದಿಲ್ಲಿ ಸವಾಲು ಹಾಕಿದರು.
ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದ ವಿಪಕ್ಷ ನಾಯಕ, ಮೇಲಾಗಿ ಆರ್.ಎಸ್. ಎಸ್. ಕಾರ್ಯಕರ್ತ. ನಾವೆಲ್ಲ ಉಗ್ರಗಾಮಿಗಳು ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಮ್ಮನ್ನು ಬಂಧಿಸಲಿ, ನಮ್ಮನ್ನು ಬಂಧಿಸುವ ಧೈರ್ಯ ಅವರಿಗೆ ಇಲ್ಲ ಎಂದು ಹೇಳಿದರು.
ನಮ್ಮ ಪಕ್ಷದ ಸಂಘಟನೆಯನ್ನು ಕಂಡು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವ ಹಾಗೂ ಮಾನಸಿಕ ಸ್ಥೀಮಿತವಿಲ್ಲದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಲು ರಾಜ್ಯ ಸರಕಾರಕ್ಕೆ ಆಗುತ್ತಿಲ್ಲ. ಅಂತಹದರಲ್ಲಿ ಹಿಂದೂ ಸಂಘಟನೆಗಳಿಗೆ ನಿಷೇಧ ಹೇರುತ್ತೇನೆ ಎಂದು ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಹೇಳಿದರು.
ರಾಜ್ಯಕ್ಕೆ ಶಿವಸೇನೆ ಪಕ್ಷ ಆಗಮಿಸಿರುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರದು, ಈ ಹಿಂದೆಯೂ ಸಾಕಷ್ಟು ಪಕ್ಷಗಳು ಬಂದುಹೋಗಿವೆ. ಅದರಿಂದ ಏನೂ ಪರಿಣಾಮ ಆಗದು ಎಂದರು.
ಮೇಯರ್ ಡಿ.ಕೆ. ಚವ್ಹಾಣ ಮತ್ತಿತರರು ಈ ಸಂದರ್ಭದಲ್ಲಿದ್ದರು.

Leave a Comment