ತಳ ಮಟ್ಟದಿಂದ ಪಕ್ಷದ ಸಂಘಟನೆಗೆ ಪ್ರಯತ್ನ: ಬೊಮ್ಮಣ್ಣ

ಬಳ್ಳಾರಿ, ಸೆ.11: ಜಿಲ್ಲೆಯಲ್ಲಿ‌ ಜೆಡಿಎಸ್ ಪಕ್ಷವನ್ನು ತಳ ಮಟ್ಟದಿಂದ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುವುದಾಗಿ ಪಕ್ಷದ ನೂತನ ಜಿಲ್ಲಾ ಅಧ್ಯಕ್ಷ ಎನ್.ಟಿ.ಬೊಮ್ಮಣ್ಣ ಹೇಳಿದ್ದಾರೆ.

ಅವರಿಂದು ನಗರದ ಕೆ.ಸಿ.ರಸ್ತೆಯಲ್ಲಿರುವ ಜೆಡಿಎಸ್ ನ ಜಿಲ್ಲಾ ಕಚೇರಿಯಲ್ಲಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನತಾ ಪಕ್ಷದಿಂದ ಜೆಡಿಎಸ್ ವರೆಗೆ ನಮ್ಮ ಪಕ್ಷವೇ ಪ್ರಬಲ ವಿರೋಧ ಪಕ್ಷವಾಗಿತ್ತು. ಆದರೆ ಹಲವು ಕಾರಣಗಳಿಂದ ಈಗ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಕುಸಿದಿದೆ. ಅದನ್ನು ಹಳ್ಳಿ ಹಳ್ಳಿಗಳಿಗೆ ತಾವು ಪ್ರವಾಸ ಕೈಗೊಂಡು ಬೂತ್ ಮಟ್ಟದಿಂದ ಪ್ರಬಲಗೊಳಿಸಲು ಪ್ರಯತ್ನಿಸಲಿದೆ.

ಬರುವ ದಿನಗಳಲ್ಲಿ ಜಿಲ್ಲಾ ಮಟ್ಟದ ಇನ್ನಿತರ ಸಮಿತಿಗಳಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಿದೆಂದು ತಿಳಿಸಿದರು.

ಬರುವ ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದ ಅವರು, ನಮ್ಮ ಪಕ್ಷದ ರಾಜಕಾರಣಿಗಳನ್ನು ತಯಾರು ಮಾಡುವ ಕಾರ್ಖಾನೆಯಂತಿದೆ. ಇಲ್ಲಿ ಬೆಳೆದ ಪಕ್ಷಿಗಳೆಲ್ಲಾ ರೆಕ್ಕೆ ಬಂದ ಮೇಲೆ ಬೇರೆ ಪಕ್ಷಗಳಿಗೆ ಹಾರಿ ಹೋಗಿವೆ. ಅಂತಹ ಪಕ್ಷಿಗಳ ಮನವೊಲಿಸಿ ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಲಿದೆ.

ಈ ಪಕ್ಷದ ಬೆಂಬಲವಿಲ್ಲದೆ ರಾಜ್ಯದಲ್ಲಿ ರಾಜಕಾರಣ, ಆಡಳಿತ ಸಾಧ್ಯವಿಲ್ಲ. ನಮ್ಮ ಪಕ್ಷ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಾತಿನಿದ್ಯ ನೀಡಿದೆ. ಆಂಧ್ರ ಪ್ರದೇಶದಲ್ಲಿ ಜಗನ್ ಅವರಂತೆ ಬರುವ ದಿನಗಳಲ್ಲಿ ಪಕ್ಷ ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರಕ್ಕೆ ಬರಲಿದೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷಾಂತರಿಗಳಿಗೆ ಬರುವ ಉಪ ಚುನಾವಣೆಗಳಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆಂದ ಅವರು, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಚಿವ ಎನ್.ಎಂ.ನಬಿ ಅವರ ಆಶಯದಂತೆ ಈ 75ನೇ ವಯಸ್ಸಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದು ಪಕ್ಷ ಸಂಘಟನೆಗೆ ನನ್ನದೇ ಪ್ರಯತ್ನ ಮಾಡುವುದಾಗಿ ಹೇಳಿದರು.

ಅಸಮಾಧಾನವಿಲ್ಲ
ನಿಕಟಪೂರ್ವ ಅಧ್ಯಕ್ಷ ಕಬ್ಬಿಣದ ಶಿವಪ್ಪ ಅಧಿಕಾರ ಹಸ್ತಾಂತರಕ್ಕೆ ಬರದೇ ಇರಲು ಅಸಮಾಧಾನ ಕಾರಣ ಅಲ್ಲ ಅವರಿಗೆ ಕೋರ್ಟ್ ಇದ್ದಕಾರಣ ಬರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ದೇಶದಲ್ಲಿ ಉದ್ಯೋಗ ಸೃಷ್ಠಿ ಇಲ್ಲದೇ ಹೋದರೂ ಯುವ ಜನತೆ ನಿರುದ್ಯೋಗದಿಂದ ಬಳಲುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿರುವುದು ತಿಳಿಯದಾಗಿದೆ. ಅವರ ಮಾತುಗಳಿಗೆ ಮರುಳಾಗಿರುವ ಇವರಿಗೆ ಭವಿಷ್ಯತ್ತಿನಲ್ಲಿ ನಿಜದ ಅರಿವಾಗಲಿದೆಂದರು.

ನಮ್ಮ ಪಕ್ಷ ದೇಶಾದ್ಯಂತ ಪ್ರಬಲವಾಗಿದೆ ಎನ್ನುವ ಬಿಜೆಪಿ ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಸೆಳೆದಿರುವುದೇಕೆ ಎಂದು ಪ್ರಶ್ನಿಸಿ ದೇಶದಲ್ಲಿ ನಮ್ಮ ಪಕ್ಷ ರೈತರ ಅಭಿವೃದ್ಧಿಗೆ ಕೈಗೊಂಡ ಕೆಲಸವನ್ನು ಯಾರು ಮಾಡಿಲ್ಲ ಎಂದರು.

Leave a Comment