ತಲೆ ಮುಸುಕಿಗೆ ವಿರೋಧ ಚೆಸ್ ಸ್ಪರ್ಧೆಯಿಂದ ದೂರಸರಿದ ಸೌಮ್ಯ

ಪುಣೆ, ಜೂ,೧೩- ತಲೆಗೆ ಮುಸುಕು ಧರಿಸಿ ಏಷ್ಯಾ ಚೆಸ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಭಾಗವಹಿಸಲು ನಿರಾಕಿರಿಸಿರುವ ಚೆಸ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಇಸ್ಲಾಮಿಕ್ ರಾಷ್ಟ್ರ ಇರಾನ್‌ನ ಹಮ್ದಾನ್‌ನಲ್ಲಿ ಜುಲೈ ೨೬ರಂದು ನಡೆಯಬೇಕಿದ್ದ ಸ್ಪರ್ಧೆಯಲ್ಲಿ ಮುಖಗವುಸು ಕಡ್ಡಾಯವಾಗಿ ಧರಿಸಲೇಬೇಕೆಂದು ನಿಯಮವಿದ್ದು, ಈ ನಿಯಮ ನನ್ನ ವೈಯಕ್ತಿಕ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಸೌಮ್ಯ ನಿರಾಕರಿಸಿದ್ದಾರೆ.

“ಒತ್ತಾಯಪೂರ್ವಕವಾಗಿ ಮುಖಗವುಸು ಅಥವಾ ಬುರ್ಖಾವನ್ನು ಧರಿಸಲು ನನಗೆ ಇಷ್ಟವಿಲ್ಲ. ಇರಾನಿಯನ್ ಕಾನೂನಿನ ಪ್ರಕಾರ ಬುರ್ಖಾ ಅಥವಾ ಮುಖಗವುಸು ಧರಿಸುವುದ ಕಡ್ಡಾಯ. ಆದರೆ ಮುಖಗವುಸು ಧರಿಸುವುದರಿಂದ ನನ್ನ ಪ್ರಾಥಮಿಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ.

ಅಷ್ಟೇ ಅಲ್ಲದೇ, ವಾಕ್ ಸ್ವಾತಂತ್ಯ್ರದ ಹಕ್ಕು ಹಾಗೂ ಯೋಚಿಸುವ ಹಕ್ಕುಗಳು ಸಹ ಇರಾನ್ ಕಾನೂನಿನಲ್ಲಿ ಇಲ್ಲ. ಈ ಎಲ್ಲಾ ಕಾನೂನುಗಳ ನಡುವೆ ನನ್ನ ಹಕ್ಕನ್ನು ನಾನು ಉಳಿಸಿಕೊಳ್ಳಬೇಕೆಂದರೆ ನಾನು ಇರಾನ್‌ಗೆ ಹೋಗದೇ ಇರುವುದೇ ಒಳಿತು,” ಎಂದು ೨೯ ವರ್ಷದ ಗ್ರ್ಯಾಂಡ್ ಮಾಸ್ಟರ್ ಸೌಮ್ಯ ತಮ್ಮ ಅಭಿಪ್ರಾಯವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳನ್ನು ಆಯೋಜಿಸುವಾಗ ಆಯಾ ದೇಶದ ತಂಡದ ಉಡುಪುಗಳನ್ನು ಅಥವಾ ಕ್ರೀಡಾ ಉಡುಪುಗಳನ್ನು ಧರಿಸಿವುದನ್ನು ಆಯೋಜಕರು ಬಯಸುತ್ತಾರೆ. ಆದರೆ ಒತಾಯಪೂರ್ವಕವಾಗಿ ಅವರ ಧಾರ್ಮಿಕ ಉಡುಪನ್ನು ಧರಿಸಲು ಹೇಳುವುದು ಸರಿಯಲ್ಲ. ಆಟಗಾರರ ಹಕ್ಕು ಹಾಗೂ ಅಭಿವೃದ್ಧಿಗೆ ಕನಿಷ್ಠ ಮಾನ್ಯತೆ ನೀಡಿರುವುದು ಬಹಳ ವಿಷಾದಕರ. ಈ ಘಟನೆಯಿದ ನನಗೆ ಬೇಸರವಾಗಿದೆ ಎಂದೂ ಸೌಮ್ಯ ಹೇಳಿಕೆದ್ದಾರೆ.

ಸೌಮ್ಯ ಭಾರತದ ೫ನೇ ಹಾಗೂ ವಿಶ್ವದ ೯೭ನೇ ಮಹಿಳಾ ಚೆಸ್ ಆಟಗಾರ್ತಿಯಾಗಿದ್ದಾರೆ.

ಹಿಂದೆಯೂ ೨೦೧೬ರಲ್ಲಿ ಭಾರತದ ಖ್ಯಾತ ಶೂಟರ್ ಹೀನಾ ಸಿಂಧು ಇದೇ ಕಾರಣದಿಂದ ಏಷ್ಯಾ ಏರ್‌ಗನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

Leave a Comment