ತಲೆನೋವಿಗೆ ಆರ್ಥಿಕ ಸಂಕಷ್ಟವೂ ಕಾರಣ

`ತಲೆನೋವು’ ಸಮಸ್ಯೆ ಎಲ್ಲರನ್ನೂ ಬಾಧಿಸುವಂತಹ ರೋಗ ಅಥವಾ ಖಾಯಿಲೆ ಎಂದರೂ ತಪ್ಪಾಗಲಾರದು. ಒಬ್ಬೊಬ್ಬರಿಗೆ ಒಂದೊಂದು ಬಗೆಯ ತಲೆನೋವು. ಈ ತಲೆನೋವಿಗೆ ಮನಸ್ಸಿನ ಒತ್ತಡಗಳೂ ಕಾರಣವೆಂದು ವಿಶ್ಲೇಷಿಸಲಾಗುತ್ತದೆ.
ಮನಸ್ಸಿಗೆ ಹಿತವಾಗದ ವಿಷಯ ಕೇಳಿದರೂ ತಲೆನೋವು ಬರುತ್ತದೆ. ನೋವು ಉಂಟು ಮಾಡುವ ವಿಚಾರಗಳಿಂದಲೂ ತಲೆನೋವು ಬರುತ್ತದೆ. ಮಾತ್ರವಲ್ಲ, ಕ್ಲಿಷ್ಟಕರ ಸಮಸ್ಯೆ ಎದುರಾದಾಗ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸುವಾಗಲೂ ಈ ಸಮಸ್ಯೆ ಕಾಡುತ್ತದೆ.
ಒಂದಂತೂ ಸತ್ಯ, ಯಾವುದಾದರೊಂದು ಸಮಸ್ಯೆಯನ್ನು ತಲೆಗೆ ಹಚ್ಚಿಕೊಂಡು ಚಿಂತಿಸಲಾರಂಭಿಸಿದವರಿಗೆ ತಲೆನೋವು ಬಾಧಿಸುವುದು ಸಾಮಾನ್ಯ, ಪರಿಹಾರ ಕೆಲವೊಮ್ಮೆ ನಮ್ಮಲ್ಲೇ ಇರುತ್ತದೆ.
ಮತ್ತೆ ಕೆಲವೊಮ್ಮೆ, ವೈದ್ಯರ ಬಳಿಗೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ತಲೆನೋವು ಬಂದಾಗ ಕೆಲವರು ಏಕಾಏಕಿ ಔಷಧಿ ಅಂಗಡಿಗೆ ಹೋಗಿ ಮಾತ್ರೆ ಖರೀದಿಸಿ ನುಂಗುತ್ತಾರೆ, ಸರಳ ಸಮಸ್ಯೆಯಾದರೆ ಪರಿಹಾರ ಸಿಗಲಿದೆ.
ಆದರೆ ಮಾತ್ರೆ ವಿಚಾರದಲ್ಲಿ ನಾವಾಗಿಯೇ ನಿರ್ಧಾರ ತೆಗೆದುಕೊಳ್ಳುವುದನ್ನು ವೈದ್ಯಲೋಕ ಒಪ್ಪುವುದಿಲ್ಲ. ತಲೆನೋವಿನ ಮೂಲ ತಿಳಿಯದೆ ಯಾವುದಾದರೊಂದು ಮಾತ್ರೆ ತೆಗೆದುಕೊಳ್ಳುವುದರಿಂದ ಕೆಲವೊಮ್ಮೆ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಇರುತ್ತದೆ.
ವೈದ್ಯರು ಹೇಳುವಂತೆ, ತಲೆನೋವಿಗೆ ಅನೇಕ ಕಾರಣಗಳಿರಬಹುದು. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಆರ್ಥಿಕ ಸಂಕಷ್ಟದಿಂದ ಉಂಟಾಗುವ ಒತ್ತಡದಿಂದಲೂ ಕೆಲವರಿಗೆ ಮೈಗ್ರೇನ್ ಸಮಸ್ಯೆ ಕಾಡುತ್ತದೆಂಬ ಅಂಶ ಬೆಳಕಿಗೆ ಬಂದಿದೆ.
ಮೈಗ್ರೇನ್ ಸಮಸ್ಯೆ ಎಲ್ಲಾ ವಯೋಮಾನದವರನ್ನೂ ಕಾಡುತ್ತದೆ. ಓದುವ ಒತ್ತಡದಲ್ಲಿರುವ ಮಕ್ಕಳು, ಯುವ ಸಮುದಾಯ, ವಿಶೇಷವಾಗಿ ಹೆಣ್ಣುಮಕ್ಕಳನ್ನು ಮೈಗ್ರೇನ್ ಕಾಡುವುದು ಹೆಚ್ಚು.
ಮೈಗ್ರೇನ್ ಸಮಸ್ಯೆ ವಿಶ್ವದಲ್ಲೆಡೆ ಸುಮಾರು ಒಂದು ಶತಕೋಟಿ ಜನರ ಮೇಲೆ ಪರಿಣಾಮ ಬೀರುವ ಗಂಭೀರ ಮತ್ತು ದುರ್ಬಲಗೊಳಿಸುವ ನರವೈಜ್ಞಾನಿಕ ಖಾಯಿಲೆಯಾಗಿದೆ.
ಹಂಗೇರಿಯಾದ ಸೆಮ್ಮಿಲ್ವಸ್ ವಿಶ್ವವಿದ್ಯಾಲಯಕ್ಕೆ ಸೇರಿದ ಸಂಶೋಧಕರು, ಮೈಗ್ರೇನ್ ಕುರಿತಂತೆ ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ಕ್ಲಾಕ್ ವಂಶವಾಹಿನಿಯು ದೇಹದ ಅನೇಕ ಲಯಬದ್ಧವಾದ ನಮೂನೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ಹೊಂದಿದೆಯಂತೆ.
ಹಣಕಾಸಿನ ಒತ್ತಡದಿಂದಲೂ ಮೈಗ್ರೇನ್ ಸಮಸ್ಯೆ ಎದುರಾಗಲಿದೆ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ.
ಅತಿಯಾದ ಕೆಲಸದ ಒತ್ತಡದಿಂದ ಉಂಟಾಗುವ ಆಯಾಸದಿಂದಲೂ ತಲೆನೋವು ಸಮಸ್ಯೆ ಎದುರಾಗಲಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಸದಾ ಒತ್ತಡದಲ್ಲೇ ಬದುಕುವ ಜನರಿಗೆ ತಲೆನೋವಿನ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ವಿಶೇಷವಾಗಿ ಮೈಗ್ರೇನ್ ಸಮಸ್ಯೆ ಬಾಧಿತರ ನೋವು ಅವರಿಗಷ್ಟೇ ಅರ್ಥವಾಗಬಲ್ಲದು.

Leave a Comment