ತಲಾಖ್ ನೀಡಿದ ಪತಿಯ ವಿರುದ್ಧ ಸಿಡಿದೆದ್ದ ಮಹಿಳೆ!: ಉಡುಪಿ ಜಿಲ್ಲೆಯಲ್ಲಿ ಮೊದಲ ಕೇಸ್

ಉಡುಪಿ, ಸೆ.೯- ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮಹಿಳೆ ಕುಂದಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಉಡುಪಿ ಜಿಲ್ಲೆಯಲ್ಲಿ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಕೇಸ್ ಆಗಿದ್ದು ಮಹಿಳೆಯ ದಿಟ್ಟತನಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಅಲ್ಫಿಯಾ ಅಖ್ತರ್(೨೯) ಎಂಬಾಕೆ ಹನೀಫ್ ಎಂಬಾತನ ಜತೆ ಕಳೆದ ಜು.೪ಕ್ಕೆ ಮದುವೆಯಾಗಿದ್ದರು. ಮದುವೆ ಸಂದರ್ಭ ಪತಿ ಮನೆಯವರು ೫ ಲ. ರೂ. ವರದಕ್ಷಿಣೆ ಕೇಳಿದ್ದರು. ಅಲ್ಫಿಯಾ ಮನೆಯವರು ೨ ಲ. ರೂ. ನೀಡಿದ್ದೆವು. ಇದೇ ಕಾರಣ ನೀಡಿ ಪತಿ ಹಾಗೂ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದು, ಆ.೧೫ರಂದು ಪತಿ ತ್ರಿವಳಿ ತಲಾಖ್ ನೀಡಿರುವುದಾಗಿ ಅಲ್ಫಿಯಾ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಲ್ಲಿ ಹಿರಿಯಡಕ ನಿವಾಸಿಗಳಾದ ಹನೀಫ್ ಸಯ್ಯದ್(೩೨), ಆತನ ತಂದೆ ಅಬ್ಟಾಸ್ ಸಯ್ಯದ್, ತಾಯಿ ಜೈತುನ್ ಹಾಗೂ ಅಕ್ಕ ಆಯೇಷಾ ಆರೋಪಿಗಳೆಂದು ಹೆಸರಿಸಲಾಗಿದೆ. ಈ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಸೆಕ್ಷನ್ ೪ರ ಮುಸ್ಲಿಂ ಮಹಿಳೆಯರ ವಿವಾಹ ರಕ್ಷಣಾ ಕಾಯಿದೆ ಹಕ್ಕಿನಡಿ ಕೇಸ್ ದಾಖಲಾಗಿದೆ. ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ವಯರ ಪ್ರಕರಣವನ್ನೂ ಹಾಕಲಾಗಿದೆ.

Leave a Comment