ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರಪ್ರಶಸ್ತಿ

ದಾವಣಗೆರೆ, ಜು. 3 – ನಗರದ ಐಸಿಎಆರ್ -ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರಮಟ್ಟದ ಪಂಡಿತ್ ದೀನದಯಾಳ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಪ್ರೋತ್ಸಾಹನ್ ಪುರಸ್ಕಾರ ಲಭಿಸಿದೆ ಜುಲೈ 16 ರಂದು ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಹಿರಿಯ ವಿಜ್ಞಾನಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಟಿ.ಎನ್.ದೇವರಾಜ್ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ದೇಶದ 706 ಕೃಷಿ ವಿಜ್ಞಾನ ಕೇಂದ್ರಗಳನ್ನು 11 ವಲಯಗಳಾಗಿ ವಿಂಗಡಿಸಲಾಗಿದೆ. ವಲಯ 11ರ ಸರ್ವಶ್ರೇಷ್ಟ ಕೆವಿಕೆಯಾಗಿ ನಮ್ಮ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಕಳೆದ 2005 ರಲ್ಲಿ ಕಾರ್ಯಾರಂಭ ಮಾಡಿದ ಕೇಂದ್ರವು ಜಿಲ್ಲೆಯ ಕೃಷಿ ವಲಯದ ಸಮಸ್ಯೆಗಳನ್ನು ಗುರುತಿಸಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಾತ್ಯಕ್ಷಿಕೆಗಳು, ರೈತರು, ಗ್ರಾಮೀಣ ಯುವಕರು, ಸರ್ಕಾರೇತರ ಸಂಸ್ಥೆಗಳಿಗೆ, ಕೃಷಿ ಕ್ಷೇತ್ರಗಳಲ್ಲಿ ತರಬೇತಿ ಆಯೋಜನೆ, 400 ಗ್ರಾಮೀಣ ಯುವಕರಿಗೆ ತಂಗಿನ ಮರ ಹತ್ತುವ, ಸಸ್ಯ ಸಂರಕ್ಷಣೆ ಬಗ್ಗೆ ತರಬೇತಿ ನೀಡಿ ಯಂತ್ರದ ಸಹಾಯದಿಂದ ಮರ ಹತ್ತುವ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಕೈತೋಟ, ತಾರಸಿತೋಟ, ತೆಂಗು ಉಳಿಸಿ ಆಂದೋಲನ, ಲದ್ದಿಹುಳು ನಿರ್ವಹಣೆಯಲ್ಲಿ ಕೃಷಿ ಇಲಾಖೆ ಜೊತೆ ಕೈಜೋಡಣೆ ಹೀಗೆ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ. ಈ ಹಿಂದೆ ನಮ್ಮ ಟಿಕೆವಿಕೆಗೆ ಬೆಸ್ಟ್ ನಿಕ್ರಾ ಪ್ರಶಸ್ತಿ ಸಹ ಲಭಿಸಿದೆ. ಇದಲ್ಲದೆ ಜಿಲ್ಲೆಯ ರೈತರಿಗೆ 4 ರಾಷ್ಟ್ರಮಟ್ಟದ ಪ್ರಶಸ್ತಿ ಸಹ ಲಭಿಸಲು ಸಹಕಾರಿಯಾಗಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಕೃಷಿ ಅನುಶೋಧಕರ ಸಮ್ಮೇಳನ ಸಹ ಆಯೋಜಿಸಲಾಗಿದೆ. 14 ವರ್ಷಗಳ ನಿರಂತರ ಶ್ರಮಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಡಾ.ಜಯದೇವಪ್ಪ, ಎಂ.ಜಿ.ಬಸವನಗೌಡರು, ಸಂತೋಷ್, ಮಲ್ಲಿಕಾರ್ಜುನ್ ಎಸ್.ಜಿ. ರಘುರಾಜ್ ಇದ್ದರು.

Leave a Comment