ತಬ್ಲಿಘಿ, ಅಜ್ಮೀರ್, ಮುಂಬೈ ರಾಜ್ಯಕ್ಕೆ ಕಂಟಕ: ಇಂದು 116 ಮಂದಿಗೆ ಸೋಂಕು, ಕೊರೊನಾಗೆ ಕರಾವಳಿ ತತ್ತರ

ಬೆಂಗಳೂರು, ಮೇ ೨೧- ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರೆಯುತ್ತಿದ್ದು, ಇಂದು 116 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1578ಕ್ಕೆ ಏರಿದೆ.
ರಾಜ್ಯಕ್ಕೆ ಮಹಾರಾಷ್ಟ್ರದ ಮುಂಬೈ ಹಾಗೂ ಅನ್ಯ ರಾಜ್ಯಗಳ ಕಂಟಕ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

  • ರಾಜ್ಯದಲ್ಲಿ ಹೊಸದಾಗಿ 116 ಸೋಂಕು ಪ್ರಕರಣಗಳು
  •  ಒಟ್ಟಾರೆ ಸೋಂಕಿತರ ಸಂಖ್ಯೆ 1578
  •  ಮುಂಬೈ ನಂಟು ರಾಜ್ಯಕ್ಕೆ ಕಂಕಟವಾಗಿದೆ
  •  ಉಡುಪಿ ಜಿಲ್ಲೆಯಲ್ಲಿ 25 ಪ್ರಕರಣಗಳೊಂದಿಗೆ ಕರಾವಳಿ ಜನರ ತತ್ತರ
  •  ಬೆಂಗಳೂರಿನಲ್ಲೂ ಮುಂದುವರೆದ ಕೊರೊನಾ ಅಟ್ಟಹಾಸ
  •  ಇದುವರೆಗೂ 41 ಮಂದಿ ಸೋಂಕಿಗೆ ಬಲಿ

ಉಡುಪಿ ಜಿಲ್ಲೆಯಲ್ಲಿಂದು 25 ಪ್ರಕರಣಗಳು ಪತ್ತೆಯಾಗುವ ಮೂಲಕ ಕರಾವಳಿಯ ಜನರನ್ನು ಕೊರೊನಾ ಬೆಚ್ಚಿಬೀಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಉಡುಪಿ-25, ಮಂಡ್ಯ-15, ಹಾಸನ-13, ಬಳ್ಳಾರಿ-11, ಉತ್ತರಕನ್ನಡ-9, ಬೆಂಗಳೂರು ನಗರ – 7, ದಕ್ಷಿಣಕನ್ನಡ, ಬಾಗಲಕೋಟೆ ಮತ್ತು ಶಿವಮೊಗ್ಗ ತಲಾ 6 ಪ್ರಕರಣಗಳು, ದಾವಣಗೆರೆ, ಬೆಳಗಾವಿ, ಧಾರವಾಡದಲ್ಲಿ ತಲಾ 5, ಗದಗ, ಚಿಕ್ಕಬಳ್ಳಾಪುರದಲ್ಲಿ ತಲಾ 2, ಮೈಸೂರು, ತುಮಕೂರು, ವಿಜಯಪುರದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಇದುವರೆಗೂ ರಾಜ್ಯದಲ್ಲಿ ಮಹಾಮಾರಿ ಸೋಂಕಿಗೆ 41 ಮಂದಿ ಸಾವನ್ನಪ್ಪಿದ್ದು, 570 ಮಂದಿ ಗುಣಮುಖರಾಗಿದ್ದಾರೆ. 966 ಪ್ರಕರಣಗಳ ಪೈಕಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಪತ್ತೆಯಾದ 116 ಹೊಸ ಪ್ರಕರಣಗಳ ಪೈಕಿ 75 ಮಂದಿ ಮುಂಬೈಗೆ ಪ್ರಯಾಣ ಬೆಳೆಸಿದ ಇತಿಹಾಸವುಳ್ಳವರಾಗಿದ್ದಾರೆ.

ದಕ್ಷಿಣಕನ್ನಡದಲ್ಲಿ ಪತ್ತೆಯಾದ ಸೋಂಕಿತರು ದುಂಬೈ ನಂಟು ಹೊಂದಿರುವುದಾಗಿ ತಿಳಿದು ಬಂದಿದೆ. ತಮಿಳುನಾಡಿನ ಚೈನ್ನೈ ಸೇರಿದಂತೆ ಗುಜರಾತ್‌ನ ಅಹಮದಾಬಾದ್ ಮತ್ತಿತರ ರಾಜ್ಯಗಳ ಪ್ರಮುಖ ನಗರಗಳಿಗೆ ಭೇಟಿಯಾಗಿ ವಾಪಸ್ಸಾಗಿರುವ ವ್ಯಕ್ತಿಗಳಲ್ಲೇ ಸೋಂಕು ಪತ್ತೆಯಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ.

ಮೈಸೂರಿನಲ್ಲಿ ಸೋಂಕಿತರೆಲ್ಲರೂ ಗುಣಮುಖರಾಗಿ ಮನೆಗಳಿಗೆ ಸೇರಿದ ನಂತರ ಒಂದೊಂದೆ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವುದು ಸಾಂಸ್ಕೃತಿಕ ನಗರಿ ಜನರನ್ನು ಮತ್ತೆ ಕಾಡಲಾರಂಭಿಸುವಂತಾಗಿದೆ.
ಬೆಂಗಳೂರು ನಗರದಲ್ಲಿ ನಿನ್ನೆವರೆಗೂ 250 ಮಂದಿ ಸೋಂಕಿತರಿದ್ದರೆ ಇಂದು ಮತ್ತೆ 6 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ನಗರವಾಸಿಗಳ ನಿದ್ದೆಗೆಡಿಸಿದೆ.

ರೋಗಿಗಳ ಸಂಪರ್ಕದಲ್ಲಿದ್ದವರಿಗೆ ಸೋಂಕು ಹರಡಿರುವುದು ವೈದ್ಯಕೀಯ ಪರೀಕ್ಷೆಗಳಿಂದ ಸಾಬೀತಾಗಿದೆ.
ತುಮಕೂರಿನಲ್ಲಿ 1 ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 16 ಕ್ಕೆ ಏರಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಇದರಿಂದಾಗಿ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವ ಸಂದರ್ಭದಲ್ಲೇ ಮತ್ತೆರಡು ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಉಂಟು ಮಾಡಿದೆ.
ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆವರೆಗೂ 112 ಸೋಂಕು ಪ್ರಕರಣಗಳು ವರದಿಯಾಗಿದ್ದವು. ಇಂದು 3 ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ಈ ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಹೆಚ್ಚಾಗುವಂತೆ ಮಾಡಿದೆ.

ಕೊರೊನಾ ನಿಗ್ರಹಕ್ಕಾಗಿ 4 ಹಂತಗಳಲ್ಲಿ ಜಾರಿಗೆ ತಂದ ಲಾಕ್‌ಡೌನ್‌ನಿಂದಾಗಿ ಸೋಂಕು ನಿಯಂತ್ರಣಕ್ಕೆ ಬಾರದೆ ಜನರಲ್ಲಿ ತೀವ್ರ ಆತಂಕ ಉಂಟು ಮಾಡುತ್ತಿದೆ. ವಿವಿಧ ಹಂತಗಳಲ್ಲಿ ಜಾರಿ ಮಾಡಲಾದ ಲಾಕ್‌ಡೌನ್ ಅವಧಿಗೆ ಇಂದಿಗೆ 58 ದಿನಗಳಾಗಿದ್ದು, ಇನ್ನೂ ಕೊರೊನಾ ಗಂಡಾಂತರದಿಂದ ರಾಜ್ಯದ ಜನತೆ ಸದ್ಯಕ್ಕೆ ಪಾರಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಇದರ ನಡುವೆಯೇ ಎಲ್ಲ ರೀತಿಯ ಸಾರಿಗೆ, ಬಸ್‌ಗಳ ಸಂಚಾರ ಆರಂಭವಾಗಿದ್ದು, ಅಂಗಡಿ ಮುಂಗಟ್ಟುಗಳು, ಎಲ್ಲ ರೀತಿಯ ವಹಿವಾಟು ಪುನರಾರಂಭಗೊಂಡಿದ್ದು, ಜನರ ಓಡಾಟವೂ ಹೆಚ್ಚಾಗುತ್ತಿದೆ.
ಲಾಕ್‌ಡೌನ್ ನಿಯಮಗಳ ಸಡಿಲಿಕೆಯಿಂದ ಜನರು ಸುರಕ್ಷತಾ ಕ್ರಮಗಳ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಂಡಿತ್ತಿಲ್ಲ. ಇಂತಹ ಕಾರಣಗಳಿಂದಾಗಿ ಮಹಾಮಾರಿ ಸೋಂಕು ನಗರ, ಪಟ್ಟಣಗಳಲ್ಲದೆ, ಗ್ರಾಮೀಣ ಭಾಗಕ್ಕೂ ವ್ಯಾಪಿಸುವಂತಾಗಿದೆ.
ಮಕ್ಕಳಲ್ಲೂ ಸೋಂಕು ಪತ್ತೆಯಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

 

 

Leave a Comment