ತಪ್ಪು ಮಾಡದ ನನ್ನನ್ನು ಸಿಲುಕಿಸಲು ಸಾಧ್ಯವಿಲ್ಲ: ಎಚ್ ಡಿ ಕುಮಾರಸ್ವಾಮಿ

ರಾಮನಗರ, ಸೆ 11 -ಜೀವನದಲ್ಲಿ ತಪ್ಪನ್ನು ಮಾಡದ ತಮ್ಮನ್ನು ಯಾವುದರಲ್ಲಿಯೂ ಸಿಲುಕಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ
ಬುಧವಾರ ಚನ್ನಪಟ್ಟಣ ತಾಲೂಕಿನಲ್ಲಿ ಶಿಕ್ಷಕರ ದಿನಾಚರಣೆ, ಪ್ರಗತಿ ಪರಿಶೀಲನಾ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಕುಮಾರಸ್ವಾಮಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸಿಲುಕಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಮುಂದೆ ಬಂಧಿಸಬಹುದೆಂದು ಪ್ರತಿಭಟನಾ ಕಾರ್ಯಕ್ರಮದ ಜಾಹೀರಾತಿನಲ್ಲಿ ನನ್ನ ಭಾವಚಿತ್ರ ಹಾಕಿದ್ದಾರಂತೆ. ಆದರೆ ಕುಮಾರಸ್ವಾಮಿಯನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ತಮಗೆ ಆಹ್ವಾನ ನೀಡಿರಲಿಲ್ಲ. ಚನ್ನಪಟ್ಟಣ ತಾಲೂಕಿನ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದವು. ಮೊದಲೇ ಆಹ್ವಾನ ನೀಡಿದ್ದರೆ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೆ. ತರಾತುರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಾನು ಭಾಗವಹಿಸದೇ ಇದ್ದರೂ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.

Leave a Comment