ತಪ್ಪಿತಸ್ಥ ಶಿಕ್ಷಕರ ಬೆಂಬಲಕ್ಕೆ ನಿಲ್ಲದಿರಲು ಮನವಿ

ಬ್ಯಾಡಗಿ,ಜ12: ಶಾಲೆಯಲ್ಲಿ ರಾಜಕೀಯ ಹಸ್ತಕ್ಷೇಪಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ನಿಯಂತ್ರಣಕ್ಕೆ ಶಿಕ್ಷಕರು ಸಿಗುತ್ತಿಲ್ಲ, ಶಾಲೆಯ ಸಮಗ್ರ ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಮೇಲುಸ್ತುವಾರಿ (ಎಸ್‍ಡಿಎಂಸಿ) ಸದಸ್ಯರು ಯಾವುದೇ ಕಾರಣಕ್ಕೂ ತಪ್ಪಿತಸ್ಥ ಶಿಕ್ಷಕರ ಬೆಂಬಲಕ್ಕೆ ನಿಲ್ಲದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ ಮನವಿ ಮಾಡಿದರು.

 
ಪಟ್ಟಣದ ಸಂತೇ ಮೈದಾನದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ನಂ-2) ಆವರಣದಲ್ಲಿ ಏರ್ಪಡಿಸಿದ್ದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸದಸ್ಯರ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿರುವ ಕಾರಣಕ್ಕೆ ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ ಇದೊಂದು ಅಪಾಯಕಾಗಿ ಬೆಳವಣಿಗೆಯಾಗಿದ್ದು, ಎಚ್ಚೆತ್ತುಕೊಳ್ಳದಿದ್ದಲ್ಲಿ ಬರುವ ದಶಕದಲ್ಲಿ ಸರ್ಕಾರಿ ಶಾಲೆಗಳು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದರು.

 

 
ಶೈಕ್ಷಣಿಕ ಪ್ರಗತಿಗಾಗಿ, ಶಿಕ್ಷಣ ಇಲಾಖೆಯ ಹತ್ತು ಹಲವು ಕಾನೂನುಗಳನ್ನು ಕಾಲಕಾಲಕ್ಕೆ ಜಾರಿಗೊಳಿಸುತ್ತಿದೆ, ಅದರಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೂಡ ಪ್ರಮುಖ ಅಂಶ, ಆದರೆ ಎಸ್‍ಡಿಎಂಸಿ ಸದಸ್ಯರ ಬೆಂಬಲ ಪಡೆಯುವ ಶಿಕ್ಷಕರು ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸುವುದೂ ಸೇರಿದಂತೆ ಅನಗತ್ಯ ಗೊಂದಲ ಸೃಷ್ಟಿಸುವ ಕಾರ್ಯದಲ್ಲಿ ತೊಡಗುತ್ತಿದ್ದಾರೆ, ಇದರಿಂದ ಇಲಾಖೆಯ ನಷ್ಟವನ್ನು ಅನುಭವಿಸುತ್ತಿದೆಯಲ್ಲದೇ ಶಿಕ್ಷಕರ ಮದ್ಯೆ ವೈಮನಸ್ಸು ಸೃಷ್ಟಿಯಾಗಿ ಶಾಲೆಯಲ್ಲಿನ ಶೈಕ್ಷಣಿಕ ವಾತಾವರಣವೇ ಹಾಳಾಗುತ್ತಿರುವುದು ದುರಂತದ ಸಂಗತಿ ಎಂದರು.

 

 
ಸುಮ್ಮನಿದ್ದು ನೋಡಿ:ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ವಿಚಾರದಲ್ಲಿ ಎಸ್‍ಡಿಎಂಸಿ ಸದಸ್ಯರ ಹಸ್ತಕ್ಷೇಪ ಹೆಚ್ಚಾಗುತ್ತಿರುವ ಕಾರಣ, ಅಧಿಕಾರಿಗಳ ಆದೇಶಗಳನ್ನು ಧಿಕ್ಕರಿಸಿ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಉದಾಹರಣೆಗಳಿದ್ದು ಇದೊಂದು ಪ್ರಮುಖ ವಿಷಯವಾಗಿ ನಮ್ಮೆಲ್ಲರನ್ನು ಕಾಡುತ್ತಿದೆ. ಎಸ್‍ಡಿಎಂಸಿ ಸದಸ್ಯರು ಶಾಲೆಯ ಇನ್ನಿತರ ಅಭಿವೃದ್ಧಿ ಚಿಂತನೆ ನಡೆಸುವ ಮೂಲಕ ಶಿಕ್ಷಕರು ಸೃಷ್ಟಿಸುವ ಅನಗತ್ಯ ಗೊಂದಲಗಳ ಬಗ್ಗೆ ಮೌನವಹಿಸಿ ಬೆಳವಣಿಗೆಯನ್ನು ಅವಲೋಕಿಸಿ ನೋಡಿ ನಿಮಗೆ ಅರ್ಥವಾಗಲಿದೆ ಎಂದರು.

 

 
ನಮ್ಮನ್ನು ಆಯ್ಕೆ ಮಾಡಿದ್ದು ಅಭಿವೃದ್ಧಿಗಾಗಿ: ಎಸ್‍ಡಿಎಂಸಿ ಸದಸ್ಯರ ಪರವಾಗಿ ಮಾತನಾಡಿದ ಆರ್.ಜಿ.ಕಳ್ಯಾಳ, ಶೈಕ್ಷಣಿಕ ಉದ್ದೇಶವನ್ನಿಟ್ಟುಕೊಂಡಾದರೂ ಶಾಲೆಗಳಲ್ಲಿ ರಾಜಕೀಯ ಮುಕ್ತ ವಾತಾವರಣವನ್ನು ನಾವೆಲ್ಲರೂ ಸೃಷ್ಟಿಸಬೇಕಾಗಿದೆ, ನಮ್ಮಗಳ ನೇಮಕದ ಹಿಂದಿನ ಉದ್ದೇಶವೇ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾಲೆಯ ಸಮಗ್ರ ಅಭಿವೃದ್ಧಿ, ಅದಕ್ಕಾಗಿ ನಮಗೂ ಸಹ ಹಣಕಾಸಿನ ವಹಿವಾಟಿಗೆ ಅವಕಾಶವನ್ನು ಸರ್ಕಾರ ಕಲ್ಪಸಿಕೊಟ್ಟಿದೆ ಅದಾಗ್ಯೂ ನಾವು ಯಾವುದೋ ಒಂದು ಪಕ್ಷದ ಹಿನ್ನೆಲೆಯನ್ನಿಟ್ಟುಕೊಂಡು ಸದಸ್ಯರಾಗುವ ಬದಲು ಮುಕ್ತ ಮನಸ್ಸಿನಿಂದ ಅಭಿವೃದ್ಧಿಯ ಕಡೆಗೆ ಚಿಂತನೆ ನಡೆಸುವುದು ಶೈಕ್ಷಣಿಕ ಅಧೋಗತಿಯಂತಹ ಈ ಸಂದರ್ಭಗಳಲ್ಲಿ ಹೆಚ್ಚು ಸೂಕ್ತವಾಗಲಿದೆ ಎಂದರು.

 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ನಂ-2) ಎಸ್‍ಡಿಎಂಸಿ ಅಧ್ಯಕ್ಷ ಪಿ.ಆರ್.ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್.ಬಾರ್ಕಿ, ಮುಖ್ಯಶಿಕ್ಷಕಿ ಎಂ.ಎಸ್.ಲಿಂಗದಹಳ್ಳಿ, ಸಿಆರ್‍ಪಿಗಳಾದ ಎ.ಎಂ.ಸೌದಾಗರ, ಯಮನಪ್ಪ, ಡಿ.ಎ.ಯಾದವಾಡ ಸೇರಿದಂತೆ ಎಲ್ಲ ಪಟ್ಟಣದ ಪರಿಮಿತಿಯಲ್ಲಿ ಬರುವ ಎಲ್ಲ ಶಾಲೆಗಳ ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

Leave a Comment