ತಪ್ಪಿತಸ್ಥ ಅಲ್ಲ- ರಾಹುಲ್ ಸಮರ್ಥನೆ

 

ಸೂರತ್, ಅಕ್ಟೋಬರ್ 10: ‘ಎಲ್ಲ ಕಳ್ಳರ ಸರ್‌ನೇಮ್‌ನಲ್ಲಿ ಮೋದಿ ಎಂದೇ ಏಕೆ ಇದೆ?’ ಎಂಬ ಹೇಳಿಕೆ ನೀಡಿದ್ದಾಗಿ ಮಾನಹಾನಿ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾವು ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿರುವ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಿಎಚ್ ಕಪಾಡಿಯಾ ಅವರ ಎದುರು ಗುರುವಾರ ಹಾಜರಾದ ರಾಹುಲ್ ಗಾಂಧಿ, ಪಶ್ಚಿಮ ಸೂರತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ದಾಖಲಿಸಿರುವ ಆರೋಪವನ್ನು ಒಪ್ಪಿಕೊಳ್ಳುತ್ತೀರೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ತಾವು ತಪ್ಪಿತಸ್ಥರಲ್ಲ ಎಂದು ಉತ್ತರಿಸಿದರು.

ರಾಹುಲ್ ಅವರು ಹೇಳಿಕೆ ದಾಖಲಿಸಿದ ಬಳಿಕ ಅವರ ಪರ ವಕೀಲರು ರಾಹುಲ್ ಈ ಪ್ರಕರಣದ ವಿಚಾರಣೆಗೆ ಇನ್ನು ಮುಂದೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕೆ ಮೋದಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಈ ಅರ್ಜಿಯ ಬಗ್ಗೆ ಡಿ. 10ರಂದು ನಿರ್ಧಾರ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತು.

ಲೋಕಸಭೆ ಚುನಾವಣೆಯ ವೇಳೆ ಕೋಲಾರದಲ್ಲಿ ಏಪ್ರಿಲ್ 13ರಂದು ಪ್ರಚಾರ ನಡೆಸುತ್ತಿದ್ದ ರಾಹುಲ್ ಗಾಂಧಿ, ‘ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ… ಇವರೆಲ್ಲರೂ ಒಂದೇ ಸರ್‌ನೇಮ್ ಹೊಂದಿದ್ದಾರೆ. ಎಲ್ಲ ಕಳ್ಳರ ಹೆಸರೂ ಮೋದಿ ಎಂಬ ಸರ್‌ನೇಮ್ ಹೊಂದಿರುವುದು ಹೇಗೆ?’ ಎಂದು ವ್ಯಂಗ್ಯವಾಡಿದ್ದರು.

ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ಅವರು ಈ ಮೂಲಕ ಇಡೀ ಮೋದಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

Leave a Comment