ಲೋಕಲ್ ಫೈಟ್ ಕೈ ಮೇಲುಗೈ : ಬಹುಪಾಲು ಅತಂತ್ರ ತಪ್ಪದ ಗೋಳು ಅಧಿಕಾರಕ್ಕಾಗಿ ಪೈಪೋಟಿ

ಬೆಂಗಳೂರು, ಸೆ. ೩- ರಾಜ್ಯದ ಮೂರು ಮಹಾನಗರ ಪಾಲಿಕೆ ಸೇರಿದಂತೆ, 105 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆದಿದ್ದು, ಹಳೆ ಮೈಸೂರು ಭಾಗದಲ್ಲಿ ಜೆಡಿಎಲ್ ಪ್ರಾಬಲ್ಯ ಮೆರೆದಿದೆ.

 • ಪಕ್ಷವಾರು ಬಲಾಬಲ, ಒಟ್ಟು ವಾರ್ಡ್,     ಕಾಂಗ್ರೆಸ್,     ಬಿಜೆಪಿ,      ಜೆಡಿಎಸ್      ಇತರೆ
  ಮಹಾನಗರ ಪಾಲಿಕೆ     – 135                 36           54             30            15
  ಪಟ್ಟಣ ಪಂಚಾಯ್ತಿ        – 355                141         129            29            59
  ನಗರಸಭೆ                   – 926                294         355          107          170
  ಪುರಸಭೆ                     – 1,246             532         379           211         115

ಒಟ್ಟಾರೆ 2,633 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 1,003, ಬಿಜೆಪಿ 927, ಜೆಡಿಎಸ್ 377 ಹಾಗೂ ಇತರೆ 356 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿ, ವಿಜಯದ ನಗೆಬೀರಿದ್ದಾರೆ.

29 ನಗರಸಭೆಗಳ ಪೈಕಿ 10 ರಲ್ಲಿ ಕಾಂಗ್ರೆಸ್, 5 ರಲ್ಲಿ ಬಿಜೆಪಿ, 3 ರಲ್ಲಿ ಜೆಡಿಎಸ್‌ಗೆ ಅಧಿಕಾರ ಹಾಗೂ 11 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 20 ಪಟ್ಟಣ ಪಂಚಾಯ್ತಿಗಳಲ್ಲಿ ತಲಾ 7 ಕಡೆ ಕಾಂಗ್ರೆಸ್, ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, 2 ರಲ್ಲಿ ಜೆಡಿಎಸ್ ಹಾಗೂ 4 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

53 ಪುರಸಭೆಗಳಲ್ಲಿ 19 ಕಡೆ ಕಾಂಗ್ರೆಸ್, 12 ಕಡೆ ಬಿಜೆಪಿ, 8 ಕಡೆ ಜೆಡಿಎಸ್ ಹಿಡಿದಿದ್ದು, 14 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

 • ಯಾರಿಗೆ ಎಷ್ಟು ಸ್ಥಾನ
  ಕಾಂಗ್ರೆಸ್        – 1,003 ಸ್ಥಾನ
  ಬಿಜೆಪಿ               – 927 ಸ್ಥಾನ
  ಜೆಡಿಎಸ್           – 377 ಸ್ಥಾನ
  ಇತರೆ               – 356 ಸ್ಥಾನ

ಒಟ್ಟಾರೆ 31 ಕಡೆ ಕಾಂಗ್ರೆಸ್, 30 ಕಡೆ ಬಿಜೆಪಿ, 13 ಕಡೆ ಜೆಡಿಎಸ್ ಅಧಿಕಾರ ಹಿಡಿದಿದ್ದು, 31 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅತಂತ್ರವಾಗಿರುವ ಕಡೆ ದೋಸ್ತಿ ಅನಿವಾರ್ಯವಾಗಿದೆ.

ಮೂರು ಮಹಾನಗರ ಪಾಲಿಕೆ ಪೈಕಿ ಶಿವಮೊಗ್ಗದಲ್ಲಿ ಕಮಲ ಅರಳಿದ್ದು, ತುಮಕೂರು ಮತ್ತು ಮೈಸೂರು ಮಹಾನಗರ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ದೋಸ್ತಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಸೃಷ್ಟಿಯಾದ ರೀತಿಯಲ್ಲಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೂರನೇ ಒಂದು ಭಾಗದಷ್ಟು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಮಟ್ಟದಲ್ಲಿ ನಡೆಯುವ ಹೊಂದಾಣಿಕೆಗಳ ಆಧಾರದ ಮೇಲೆ ಯಾರಿಗೆ ಅಧಿಕಾರ ಎನ್ನುವುದು ಸ್ಪಷ್ಟವಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಮಿನಿಸಮರ ಎಂದು ಬಿಂಬಿತವಾಗಿದ್ದು, ಈ ಚುನಾವಣೆ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಿದೆ. ಮತದಾರ ನೀಡಿರುವ ತೀರ್ಪನ್ನು ರಾಜಕೀಯ ಪಕ್ಷಗಳು ಗೌರವಿಸಿ, ಮುಂದಿನ ಹೆಜ್ಜೆ ಇಡುವ ಅನಿವಾರ್ಯತೆ ಎದುರಾಗಿದೆ.

ಮಹಾನಗರ ಪಾಲಿಕೆಯ 135 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 36, ಬಿಜೆಪಿ 54, ಜೆಡಿಎಸ್ 30, ಪಕ್ಷೇತರರು 15 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. ಪಟ್ಟಣ ಪಂಚಾಯ್ತಿಯ 358 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 141, ಬಿಜೆಪಿ 129, ಜೆಡಿಎಸ್ 29 ಹಾಗೂ ಇತರೆ 59 ಮಂದಿ ಗೆಲುವಿನ ನಗೆ ಬೀರಿದ್ದಾರೆ.

ನಗರ ಸಭೆಯ 926 ವಾರ್ಡ್‌ಗಳಲ್ಲಿ ಕಾಂಗ್ರೆಸ್ 294, ಬಿಜೆಪಿ 355, ಜೆಡಿಎಸ್ 107 ಹಾಗೂ 170 ಕಡೆ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. 1,247 ಪಟ್ಟಣ ಪಂಚಾಯ್ತಿ ವಾರ್ಡ್‌‌ಗಳಲ್ಲಿ ಕಾಂಗ್ರೆಸ್ 532, ಬಿಜೆಪಿ 389, ಜೆಡಿಎಸ್ 211 ಹಾಗೂ ಪಕ್ಷೇತರರು 115 ಕಡೆ ಗೆಲುವು ಸಾಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಹಳೆ ಮೈಸೂರು ಭಾಗದ ಹಾಸನ, ಮಂಡ್ಯ, ತುಮಕೂರು ಭಾಗಗಳಲ್ಲಿ ಜೆಡಿಎಸ್ ಪಕ್ಷ ಪ್ರಾಬಲ್ಯ ಮೆರೆದಿದ್ದರೆ, ಕರಾವಳಿ, ಉತ್ತರ ಕರ್ನಾಟಕದ ಹಲವೆಡೆ ಬಿಜೆಪಿ ಪ್ರಭುತ್ವ ಸಾಧಿಸಿದೆ. ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಗೆಲುವು ಸಾಧಿಸಿ, ಜೆಡಿಎಸ್, ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರೂ ನಿರೀಕ್ಷಿತ ಮಟ್ಟಕ್ಕೆ ಜನರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲೂ ಹಿನ್ನೆಡೆಯಾಗಿದೆ.

ಹಳೆ ಮೈಸೂರು ಭಾಗದಲ್ಲಿ ಎಂದಿನಂತೆ ಜೆಡಿಎಸ್ ಪ್ರಾಬಲ್ಯ ಸಾಧಿಸಿದೆ. ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳು ತೆನೆ ಹೊತ್ತ ಮಹಿಳೆಯ ಪಾಲಾಗಿವೆ.

ಕಾಂಗ್ರೆಸ್ ಪಕ್ಷ ಹಲವೆಡೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಮತ್ತೆ ಕೆಲವು ಕಡೆ ಗೆಲುವು ಸಾಧಿಸುವಲ್ಲಿ ವಿಫಲವಾಗಿ ಅತಂತ್ರ ಸ್ಥಿತಿಗೆ ತಲುಪುವಂತಾಗಿದೆ. ಕೆಲವೆಡೆ ಅಂತೂ ಪಕ್ಷ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ. ಇದಕ್ಕೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತವರು ಜಿಲ್ಲೆ ತುಮಕೂರು ಜಿಲ್ಲೆಯಲ್ಲಿ ಅವರಿಗೆ ಮುಖಭಂಗವಾಗಿದೆ. ಅಲ್ಲದೆ ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಚಾಮರಾಜನಗರ ಜಿಲ್ಲೆ ಸಚಿವ ಪುಟ್ಟರಂಗ ಶೆಟ್ಟಿಗೆ ತೀವ್ರ ಮುಖಭಂಗವಾಗಿದೆ. ಹಾಸನ ಜಿಲ್ಲೆಯಲ್ಲಿ ಸಚಿವ ಹೆಚ್.ಡಿ. ರೇವಣ್ಣ ಸ್ವಕ್ಷೇತ್ರ ಹೊಳೆನರಸಿಪುರ ಪುರಸಭೆಯಲ್ಲಿ 23 ಸ್ಥಾನಗಳನ್ನು ಜೆಡಿಎಸ್ ತನ್ನದಾಗಿಸಿಕೊಂಡಿದೆ.

ಮಂಗಳೂರು ಭಾಗದಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ಗೆ ಹಿನ್ನೆಡೆಯಾಗಿದ್ದು, ಸ್ವಕ್ಷೇತ್ರ ಉಲ್ಲಾಳದಲ್ಲೂ ಫಲಿತಾಂಶ ಅತಂತ್ರವಾಗಿದೆ. ಕಲ್ಬುರ್ಗಿಯಲ್ಲಿ ಸೇಡಂ ಪುರಸಭೆ ಬಿಜೆಪಿ ತೆಕ್ಕೆಗೆ ಮರಳಿದ್ದು, ಇದರಿಂದಾಗಿ ಮಾಜಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಮುಖಭಂಗ ಅನುಭವಿಸುವಂತಾಗಿದೆ.

ಚಿತ್ರದುರ್ಗ ನಗರಸಭೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ದಂಪತಿಗಳಾದ ಮಂಜುನಾಥ್ ಗೊಪ್ಪೆ ಹಾಗೂ ಜಯಂತಿ ಗೊಪ್ಪೆ ಜಯಗಳಿಸಿದ್ದಾರೆ.

ಖಾನಾಪುರದಲ್ಲಿ ಬಿಜೆಪಿ ಶಾಸಕಿ ಶಶಿಕಲ ಜೊಲ್ಲೆ ಕ್ಷೇತ್ರದಲ್ಲಿ ಪುರಸಭೆ ಸಂಪೂರ್ಣ ಪಕ್ಷೇತರರ ಪಾಲಾಗಿದೆ.

ಹಲವೆಡೆ ಫಲಿತಾಂಶ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಕೆಲವರಿಗೆ ಅದೃಷ್ಟ ಖುಲಾಯಿಸಿದೆ. ಇನ್ನೂ ಕೆಲವರು ಒಂದು ಮತದ ಅಂತರದಿಂದ ಸೋತು ನಿರಾಸೆ ಅನುಭವಿಸಿದ್ದಾರೆ.

Leave a Comment