ತತ್ವಪದಗಳಲ್ಲಿಯ ಸಂದೇಶವನ್ನು ಜೀವಮದಲ್ಲಿ ಅಳವಡಿಸಿಕೊಳ್ಳಲು ಕರೆ- ಮಂಜುಳಾ

ಧಾರವಾಡ ಜೂ.28–“ಹಸಿವು ಪ್ರತಿಯೊಬ್ಬರಿಗೂ ಇರುತ್ತದೆ, ಬಹಳ್ಳಷ್ಟು ಹಸಿವಾದಾಗ ಸ್ವಲ್ಪ ನೀರು ಸಿಕ್ಕರೂ ಅದು ಅಮೃತಕ್ಕೆ ಸಮಾನವಾಗಿರುತ್ತದೆ.  ಇಲ್ಲಿರುವವರಿಗೆ ಸಾಂಸ್ಕೃತಿಕ ಹಸಿವಿದೆ.  ಆ ಸಾಂಸ್ಕೃತಿಕ ಹಸಿವನ್ನು ಪೂರೈಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಥ ಸಾಂಸ್ಕೃತಿಕ ಸಂಸ್ಥೆಗಳು ಇಲ್ಲಿ ಒಂದು ವಾರಗಳ ಕಾಲ ತತ್ವಪದ ಹಾಡುಗಾರಿಕೆ ಕಾರ್ಯಾಗಾರವನ್ನು ಆಯೋಜನೆ ಮಾಡಿರುವುದು ಬಹಳ ಔಚಿತ್ಯಪೂರ್ಣವಾಗಿದೆ” ಎಂದು ಮಂಜುಳಾ ಯಲಿಗಾರ ಅವರು ಹೇಳಿದರು.
ಧಾರವಾಡ ಕೇಂದ್ರ ಕಾರಾಗೃಹದ ಗಾಂಧಿ ಭವನದಲ್ಲಿ ಜಾನಪದ ಸಂಶೋಧನಾ ಕೇಂದ್ರ ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಒಂದು ವಾರಗಳ ಕಾಲ ಏರ್ಪಡಿಸಿದ್ದ “ತತ್ವಪದ ಹಾಡುಗಾರಿಕೆ ಕಾರ್ಯಾಗಾರ”ವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ(ಪ್ರ) ಮಂಜುಳಾ ಯಲಿಗಾರ ಅವರು ಮಾತನಾಡುತ್ತ ತಾವೆಲ್ಲ ತತ್ವಪದಗಳಲ್ಲಿ ಸಾರವನ್ನು ಅರಿಯಬೇಕು.  ಸಂತ ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ ಇವರಂತ ಅನೇಕ ತತ್ವ ಪದಕಾರರು ಸಾವಿರಾರು ತತ್ವಪದಗಳನ್ನು ನಮಗೆ ನೀಡಿದ್ದಾರೆ. ಪ್ರತಿಯೊಂದು ತತ್ವಪದವೂ ಕೂಡ ಅತ್ಯಂತ ಅಮೂಲ್ಯವಾದ ಸಂದೇಶವುಳ್ಳದ್ದಾಗಿವೆ.  ತಾವು ಅದರಲ್ಲಿರುವ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಕೈಜೋಡಿಸೋಣ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ.ಆರ್.ಅನಿತಾ ಮಾತನಾಡುತ್ತ ಕಾರಾಗೃಹದಲ್ಲಿರುವ ಶಿಕ್ಷಾಬಂಧಿಗಳು ಈ ಒಂದು ತತ್ವಪದ ಹಾಡುಗಾರಿಕಾ ಶಿಬಿರದಲ್ಲಿ ಪಾಲ್ಗೊಂಡು ಅದರ ತತ್ವವನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಮನ ಪರಿವರ್ತನೆ ಮಾಡಿಕೊಳ್ಳಬೇಕು.  ಮ್ಯೂಜಿಕ್ ಥೆರಪಿ ಮೂಲಕ ಹಲವಾರು ಮನೋ ಕಾಯಿಲೆಗಳು ವಾಸಿ ಮಾಡಬಹುದಾಗಿದೆ. ಅಂತ ಶಕ್ತಿಯುಳ್ಳ ಸಂಗೀತವನ್ನು ಆಲಿಸುವ ಮೂಲಕ, ಕಲಿಯುವ ಮೂಲಕ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡುತ್ತ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಾಗ ನಾವು ಸಂತೋಷ ಪಡುತ್ತೇವೆ ಆದರೆ ಜೈಲಿಗೆ ಬರುವವರ ಸಂಖ್ಯೆ ಕಡಿಮೆ ಯಾದರೆ ನಾವು ಸಂತೋಷ ಪಡುವಂತಾಗಬೇಕು ಅಂದಾಗ ಮಾತ್ರ ನಾವು ಸ್ವಸ್ತ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಹೇಳಿದರು.
ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ನಾವು ಹಲವಾರು ಜೈಲುಗಳಲ್ಲಿ ಇಂಥಹ ಕಾರ್ಯಾಗಾರವನ್ನು ಆಯೋಜನೆ ಮಾಡಿದ್ದೇವೆ.  ಆದರೆ ಧಾರವಾಡ ಕೇಂದ್ರ ಕಾರಾಗೃಹದ ವಾತಾವರಣವು ಕಾರ್ಯಾಗಾರ ಮಾಡಲು ಬಹಳ ಸೂಕ್ತ ಸ್ಥಳವಾಗಿದೆ ಎಂದರು.
ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಸವಲಿಂಗಯ್ಯ ಹಿರೇಮಠ ಪ್ರಾರ್ಥಿಸಿದರು.  ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು.  ಮಲ್ಲಿಕಾರ್ಜುನ ಸೊಲಗಿ ವಂದಿಸಿದರು.  ಮಲ್ಲಿಕಾರ್ಜುನ ಚಿಕ್ಕಮಠ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಜೈಲರುಗಳಾದ ದುಂಡಪ್ಪ ತುರಾವಿ, ಅನಿತಾ ಹಿರೇಮನಿ, ಕೆ.ಬಿ.ಬಿಂಧು, ಶರಣ ಬಸವ, ಜಾನಪದ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಭೂಷಣ ಹಿರೇಮಠ ಇದ್ದರು.

Leave a Comment