ತಜ್ಞರ ಸಮಿತಿ ರಚಿಸುವಂತೆ ಸಿ.ಎಚ್.ವಿಜಯಶಂಕರ್ ಆಗ್ರಹ

ಆಗಸ್ಟ್ ನಲ್ಲಿ ನೀರಾವರಿ ಕಚೇರಿಗೆ ಮುತ್ತಿಗೆ
ಮೈಸೂರು, ಜು.17: ರಾಜ್ಯದ ಮುಖ್ಯಕಾರ್ಯದರ್ಶಿ ಅವರ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ, ನೀರಾವರಿ, ಪಶುಸಂಗೋಪನೆ, ರೇಷ್ಮೆ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಸದ್ಯದ ಪರಿಸ್ಥಿತಿಯ ಬಗ್ಗೆ ತಜ್ಞರ ಸಮಿತಿ ರಚಿಸುವಂತೆ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಸರ್ಕಾರವನ್ನು ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಮಳೆಯು ಕೈಕೊಟ್ಟಿರುವ ಹಿನ್ನಲೆಯಲ್ಲಿ ರಾಜ್ಯದ ರೈತರಯು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೆ ತಾತ್ಸಾರ ಉಂಟಾಗಿದೆಯಲ್ಲದೇ, ಜಾನುವಾರುಗಳಿಗೂ ಮೇವು ಇಲ್ಲದ ಪರಿಸ್ಥಿತಿ ಒದಗಿ ಬಂದಿದ್ದು, ಈ ದಿಸೆಯಲ್ಲಿ ಸರ್ಕಾರವು ರೈತರ ಹಿತ ಕಾಪಾಡುವ ದೃಷ್ಟಿಯಿಂದ ಕೃಷಿ, ತೋಟಗಾರಿಕೆ, ನೀರಾವರಿ, ಪಶುಸಂಗೋಪನೆ, ರೇಷ್ಮೆ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಗ್ರ ಚರ್ಚೆ ನಡೆಸುವಂತೆ ಆಗ್ರಹಿಸಿದರು.
ಆಗಸ್ಟ್ ಮೊದಲನೇ ವಾರದಲ್ಲಿ ಧರಣಿ:
ರಾಜ್ಯದಲ್ಲಿರುವ ಯಾವುದೇ ಜಲಾಶಯಗಳು ತುಂಬಿಲ್ಲ. ಆದರೆ ಅಲ್ಪ ಸ್ವಲ್ಪ ಮಳೆ ಬಿದ್ದಿರುವುದರಿಂದ ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ಕೊಂಚ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯ ತುಂಬುವವರೆಗೂ ಸರ್ಕಾರ ಕಾಯದೇ ಕಾವೇರಿ ಮಧ್ಯಂತರ ತೀರ್ಪಿನನ್ವಯ ತಮಿಳು ನಾಡಿಗೆ ನೀರು ಹರಿ ಬಿಡುತ್ತಿರುವುದು ಖಂಡನೀಯ.
ಕೃಷಿ ಇಲಾಖೆ ಸಂಪೂರ್ಣ ನಿದ್ದೆ ಹೋಗಿದೆ. ರೈತರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಯಾವುದೇ ಸಲಹೆ ಸೂಚನೆ ನೀಡುತ್ತಿಲ್ಲ. ಮುಂಗಾರು ವಿಫಲವಾಗಿರುವುದರಿಂದ ಸಾಂಪ್ರಾದಯಿಕ ಬೆಳೆ ಬೆಳಯಲು ಸಾಧ್ಯವಾಗುವುದಿಲ್ಲ. ಬದಲಾಗಿ ಪರ್ಯಾಯ ಬೆಳೆ ಬೆಳಯುವ ಬಗ್ಗೆ ರೈತರಿಗೆ ಸಲಹೆ ನೀಡಿಲ್ಲ. ಕೃಷ್ಣಾ ಕೊಳ್ಳದಿಂದ ಹಿಡಿದು ಕಾವೇರಿ ಕೊಳ್ಳದವರೆಗಿನ ನೀರಾವರಿ ಇಲಾಖೆ ಅಧಿಕಾರಿಗಳು ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ವಿಫಲರಾಗಿದ್ದಾರೆ. ಈ ದಿಸೆಯಲ್ಲಿಯೂ ಸರ್ಕಾರ ಗಮನ ಹರಿಸುವಂತೆ ಆಗ್ರಹಿಸಿದ ಅವರು, ಈ ಸಭೆಗೆ ಆ ಕೊಳ್ಳಗಳ ರೈತರನ್ನು ಆಹ್ವಾನಿಸುವಂತೆ ಒತ್ತಾಯಿಸಿದರು.
ಜುಲೈ ಅಂತ್ಯದೊಳಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಯದಿದ್ದಲ್ಲಿ, ಆಗಸ್ಟ್ ಮೊದಲನೇ ವಾರದಲ್ಲಿ ನೀರಾವರಿ ಇಲಾಖೆ ಅಧೀಕ್ಷಕ ಕಛೇರಿಗೆ ಮುತ್ತಿಗೆ ಹಾಕಿ ಕಾರ್ಯನಿರ್ವಹಿಸದಂತೆ ತಡೆಯೊಡ್ಡಲಾಗುವುದು ಎಂದರು.
ಬೇಜವಬ್ದಾರಿ ತೋಟಗಾರಿಕೆ ಇಲಾಖೆ:
ಕೇಂದ್ರ ಸರ್ಕಾರವು ಜಾರಿ ಗೊಳಿಸಿರುವ ಫಸಲ್‍ಭೀಮಾ ಯೋಜನೆ ಅಡಿಯಲ್ಲಿ ವಾಣಿಜ್ಯ ಬೆಳೆಗಳಾದ ಅರಿಶಿಣ, ದಾಳಿಂಬೆ, ಎಲೆಕೋಸು ಇತ್ಯಾದಿ ಅಲ್ಪಕಾಲಿಕ ಬೆಳೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಸೌಲಭ್ಯವನ್ನು ದೀರ್ಘಕಾಲಿಕ ಬೆಳೆಗಳಾದ ತೆಂಗು, ಅಡಿಕೆ, ಮಾವು ಈ ಬೆಳೆಗಳಿಗೂ ಅನ್ವಯಿಸುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ವಿನಂತಿಸಿಕೊಂಡರು, ಅವರು ಬೇಜವಬ್ದಾರಿತನ ತೋರುತ್ತಿದ್ದಾರೆ. ಈ ಬೆಳೆ ಹಾಗೂ ಯೋಜನೆ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡದಿದ್ದಲ್ಲಿ ತೋಟಗಾರಿಕಾ ಇಲಾಖೆ ಬಾಗಿಲು ತೆಗೆದು ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ತೋಟಗಾರಿಕೆ ಪ್ರದೇಶ ಕೇವಲ 27 ಭಾಗವಿದ್ದು, ಕಳೆದ ಮೂರು ವರ್ಷದ ಭೀಕರ ಬರಗಾಲದ ಅವಧಿಯಲ್ಲಿ 50ರಷ್ಟು ಭಾಗ ಸಂಪೂರ್ಣ ನಾಶವಾಗಿದೆ. ಉಳಿದ ಭಾಗದಲ್ಲಿರುವ ಬೆಳೆಗಳನ್ನಾದರೂ ಉಳಿಸಿಕೊಳ್ಳಲು ಸರ್ಕಾರ ಸಮಿತಿಯೊಂದನ್ನು ರಚಿಸುವಂತೆ ಸಲಹೆ ನೀಡಿದರು.
ಕುಡಿಯುವ ನೀರು:
ಈ ಬಾರಿಯೂ ಸಹ ಮುಂಗಾರು ವಿಫಲವಾಗಿರುವುದರಿಂದ ರಾಜ್ಯಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಕಂಡು ಬಂದಿದೆ. ಈಗ ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಕುಡಿಯುವ ನೀರಿಗೆ ಅವಶ್ಯವಿರುವಷ್ಟನ್ನು ಕಾಯ್ದಿರಿಸಿಕೊಳ್ಳುವ ದಿಸೆಯಲ್ಲಿ ಇಂದಿನಿಂದಲೇ ಸರ್ಕಾರ ಕಾರ್ಯೋನ್ಮುಖವಾಗಬೇಕು. ಈಗ ಮಳೆ ಬೀಳುತ್ತಿದೆ. ಈಗ ಮಳೆ ಬೀಳುತ್ತಿದೆ ಎಂಬ ಮನೋಭಾವದಿಂದ ವರ್ತಿಸುವುದನ್ನು ಬಿಟ್ಟು, ಪೂರ್ವ ಭಾವಿ ಸಿದ್ದತೆ ಮಾಡಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈಗಲೇ ಕೇಂದ್ರಕ್ಕೆ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸುವಂತೆ ಕೇಂದ್ರಕ್ಕೆ ಮನವಿ ಮಾಡುವಂತೆ ಸಲಹೆ ಇತ್ತ ಅವರು, ಸರ್ಕಾರ ಈ ದಿಸೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಿವಂತೆ ಆಗ್ರಹಿಸಿದರು. ಇದಕ್ಕೆ ನಾವು ಸಹ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಗೋಷ್ಟಿಯಲ್ಲಿ ಮಾಜಿ ಸಚಿವ ಎಂ.ಶಿವಣ್ಣ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಸನ್ನ ಎನ್.ಗೌಡ, ಪ್ರಭಾಕರ್, ಬೋರೇಗೌಡ, ರಾಜೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Comment