ತಗ್ಗದ ಬಿಸಿಲ ತಾಪ : ಕುಡಿಯುವ ನೀರಿಗಾಗಿ ಪರದಾಟ

 

ಕಲಬುರಗಿ,ಮೇ.15-ಫನಿ ಚಂಡಮಾರುತದ ಪರಿಣಾಮ ಕೆಲಕಾಲ ತಗ್ಗಿದ ಬಿಸಿಲ ತಾಪ ಈಗ ಮತ್ತೆ ಹೆಚ್ಚಾಗಿದೆ. ಒಂದಡೆ ಜನ ಬಿಸಿಲಿನಿಂದ ಬೇಸತ್ತು ಹೋಗಿದ್ದರೆ, ಇನ್ನೊಂದೆಡೆ ಕುಡಿಯುವ ನೀರಿಗಾಗಿ ಪರದಾಟ ನಡೆದಿದೆ.

ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ತೀವ್ರ ತತ್ವಾರ ಕಂಡುಬಂದಿದ್ದು, ಕೊಡ ನೀರಿಗಾಗಿಯೂ ಜನ ಪರದಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ಕುಡಿಯುವ ನೀರಿನ ಬವಣೆ ಹೇಳತೀರದಾಗಿದೆ. ಹವಾಮಾನ ಇಲಾಖೆಯ ವರದಿಯಂತೆ ಮಂಗಳವಾರ ಕಲಬುರಗಿಯಲ್ಲಿ ಹಗಲು 42.8, ರಾತ್ರಿ 30 ಡಿಗ್ರಿ ಸೆಲ್ಸಿಯಸ್, ರಾಯಚೂರು ಜಿಲ್ಲೆಯಲ್ಲಿ ಹಗಲು 42.5 ರಾತ್ರಿ 28.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಹಗಲು 40.5, ರಾತ್ರಿ 24, ಬಾಗಲಕೋಟ ಜಿಲ್ಲೆಯಲ್ಲಿ ಹಗಲು 40.6, ರಾತ್ರಿ 24.5, ಬೀದರ್ ಜಿಲ್ಲೆಯಲ್ಲಿ ಹಗಲು 40. ರಾತ್ರಿ 26.6, ಕೊಪ್ಪಳ ಜಿಲ್ಲೆಯಲ್ಲಿ ಹಗಲು 39.5, ರಾತ್ರಿ 24, ಗದಗ ಜಿಲ್ಲೆಯಲ್ಲಿ ಹಗಲು 39.3 ರಾತ್ರಿ 23.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಗಳಲ್ಲಿನ್ನೂ ಬಿರು ಬಿಸಿಲು ಮುಂದುವರಿದ್ದಿದ್ದು, ಕುಡಿಯುವ ನೀರಿಗೂ ತೀವ್ರ ತತ್ವಾರ ಉಂಟಾಗಿದೆ. ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಬಾರಿ ಕುಡಿಯುವ ನೀರಿನ ತೀವ್ರ ತಾಪತ್ರೆಯ ಉಂಟಾಗಿದೆ. ಜನ ಮಾತ್ರವಲ್ಲದೆ ಮೇವು, ನೀರಿನ ತೀವ್ರ ಕೊರತೆಯಿಂದಾಗಿ ಜಾನುವಾರುಗಳ ಸಹ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಜಾನುವಾರುಗಳಿಗೆ ಮೇವು, ನೀರು ಒದಗಿಸಲು ರೈತಾಪಿವರ್ಗ ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಕಾಲಕ್ಕೆ ಮಳೆಯಾದರೆ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಯಲಿದೆ. ಇಲ್ಲದೇ ಹೋದಲ್ಲಿ ಮುಂದೆ ಕುಡಿಯುವ ನೀರು ಸಿಗದೇ ಇರುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗುವ ಸ್ಥಿತಿ ಎದುರಾಗಲಿದೆ.

ಸತತ ಬರಗಾಲದಿಂದಾಗಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಕೆಲವು ಕಡೆ ಕೊಳವೆ ಬಾವಿ ತೋಡಿದರೂ ನೀರು ಬೀಳದಂತಹ ಸ್ಥಿತಿ ನಿರ್ಮಾಣವಾಗಿದೆ.

@12bc = 133 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ 133 ಗ್ರಾಮಗಳಿಗೆ 140 ಟ್ಯಾಂಕರ್ ಮೂಲಕ ಪ್ರತಿನಿತ್ಯ 435 ಟ್ರಿಪ್ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸಲು ಟ್ಯಾಂಕರ್ ಬದಲಾಗಿ ಪರ್ಯಾಯ ಜಲಮೂಲ ಪತ್ತೆ ಹಚ್ಚಲು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೇವಿನ ಕೊರತೆ ನೀಗಿಸಲು ಜಿಲ್ಲೆಯಲ್ಲಿ 14 ಮೇವು ಬ್ಯಾಂಕ್ ಸ್ಥಾಪಿಸಲಾಗಿದ್ದು, 10 ವಾರಗಳಿಗೆ ಬೇಕಾಗುವಷ್ಟು 44 ಮೆಟ್ರಿಕ್ ಟನ್ ಮೇವು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

Leave a Comment