ತಂಬಾಕು ಮುಕ್ತವಾಗುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ: ಜಿಲ್ಲಾಧಿಕಾರಿ

ಧಾರವಾಡ,ಮೇ.31- ಯುವಸಮುದಾಯದ ಮೇಲೆ ತಂಬಾಕು ಉತ್ಪನ್ನಗಳು ಮತ್ತು ನಿಕೋಟಿನ್ ಬಳಸಿರುವ ಪದಾರ್ಥಗಳು ಗಂಭೀರವಾದ ಪರಿಣಾಮ ಉಂಟು ಮಾಡಿ, ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ. ಇದರಿಂದಾಗಿ ದೇಶದ ಅಭಿವೃದ್ಧಿ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ತಂಬಾಕು ಹಾಗೂ ಇತರೇ ತಂಬಾಕು ಉತ್ಪನ್ನಗಳ ಬಳಕೆ ಮಾಡದಂತೆ ಸಮಾಜದಲ್ಲಿ ಹೆಚ್ಚು ಹೆಚ್ಚು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ತಂಬಾಕು ರಹಿತ ದಿನಾಚರಣೆ ಕುರಿತ ಘೋಷವಾಖ್ಯ ಮುದ್ರಿತ ಮಾಸ್ಕ್ ಗಳನ್ನು ವಿತರಿಸಿ, ಮಾತನಾಡಿದ ಅವರು ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ,ಮ ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಭಾರತ ಸರಕಾರವು 2003 ರಲ್ಲಿ ತಂಬಾಕು ನಿಯಂತ್ರಣ (ಕೋಟ್ಪಾ) ಕಾನೂನು ಜಾರಿಗೊಳಸಿದೆ. ಆ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುವ ಯಾವೂದೇ ವ್ಯಕ್ತಿಗೆ ಪ್ರತಿ ಸಲ ರೂ.200 ಗಳ ದಂಡವನ್ನು ಸ್ಥಳದಲ್ಲಿಯೇ ವಿಧಿಸಿ, ವಸೂಲು ಮಾಡಲು ಅಧಿಕಾರ ನೀಡಿದೆ ಎಂದು ಅವರು ತಿಳಿಸಿದರು
ತಂಬಾಕು ಹಾಗೂ ನಿಕೋಟಿನ್ ಪದಾರ್ಥಗಳನ್ನು ಸೇವಿಸುವುದು ಒಂದು ಸಾಮಾಜಿಕ ಪಿಡುಗು ಆಗಿ ರೂಪುಗೊಂಡಿದೆ. ಇದರ ನಿಯಂತ್ರಣಕ್ಕೆ ಶಾಲೆ, ಕಾಲೇಜು ಸೇರಿದಂತೆ ಹೆಚ್ಚು ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯುವಕರಲ್ಲಿ, ಪಾಲಕರಲ್ಲಿ ತಂಬಾಕು ಸೇವನೆಯಿಂದ ಆಗುವ ಹಾನಿ, ರೋಗಗಳ ಬಗ್ಗೆ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು “ ಯುವ ಪೀಲಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನೊಕೋಟಿನ್‍ನ ಬಳಕೆಯಿಂದ ರಕ್ಷಣೆ ಮಾಡುವುದು” ಎಂಬ ಘೋಷವಾಕ್ಯ ನೀಡಿ, ಇದರ ಸಂಬಂಧಿತ ಮಾಹಿತಿ ಶಿಬಿರ, ಸಾಮಾಜಿಕ ಅರಿವು ಉಂಟು ಮಾಡುವ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದೆ ಎಂದರು. ಧಾರವಾಡ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶದ ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಆರೋಗ್ಯ ಇಲಾಖೆ ಮೂಲಕ ವರ್ಷಪೂರ್ತಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದೆಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾ ಹಾಗೂ ತಂಬಾಕು ನಿಯಂತ್ರಣಾಧಿಕಾರಿ ಡಾ. ಸುಜಾತಾ ಹಸವಿಮಠ ಮಾತನಾಡಿ, ಸಾರ್ವಜನಿಕರಲ್ಲಿ ತಂಬಾಕು ಸೇವನೆ ಮಾಡದಂತೆ ಮತ್ತು ತಂಬಾಕು ಸೇವನೆಯಿಂದ ಬರುವ ಕ್ಯಾನ್ಸರ್ ದಂತ ರೋಗಗಳ ಬಗೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಐದು ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಗುಲಾಬಿ ಹೂ ವಿತರಿಸುವ ಮೂಲಕ ತಂಬಾಕು ನಿಯಂತ್ರಣದ ಬಗೆಗೆ ಗಮನ ಸೆಳೆಯಲಾಗಿದೆ ಎಂದು ಡಾ. ಸುಜಾತಾ ಹಸವಿಮಠ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಎಸ್.ಎಮ್.ಹೊನಕೇರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಾಣಾಧಿಕಾರಿ ಡಾ.ಕೆ.ಎನ್.ತನುಜಾ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿವರ್ಗದವರು, ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದರು.

Share

Leave a Comment