ತಂದೆ-ಪತ್ನಿ ಕೊಲೆ: ಆರೋಪಿ ಪೊಲೀಸರಿಗೆ ಶರಣು

ಕುಣಿಗಲ್, ಜು. ೧೧- ಮನೆಯಲ್ಲಿ ಮಲಗಿದ್ದ ತನ್ನ ತಂದೆ ಮತ್ತು ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಕಾಂತಯ್ಯನಪಾಳ್ಯದಲ್ಲಿ ತಡರಾತ್ರಿ ನಡೆದಿದೆ.

ಮಾವ ಈರಣ್ಣ (65) ಹಾಗೂ ಸೊಸೆ ಸೌಮ್ಯ (24) ಎಂಬುವರೇ ಕೊಲೆಯಾಗಿರುವ ದುರ್ದೈವಿಗಳು. ಈರಣ್ಣನ ಮಗ ನಾರಾಯಣಸ್ವಾಮಿ ರಾತ್ರಿ ಮನೆಯಲ್ಲಿ ಮಲಗಿದ್ದ ತನ್ನ ಪತ್ನಿ ಸೌಮ್ಯ ಹಾಗೂ ತಂದೆ ಈರಣ್ಣರವರನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದನು.

ಈತ ತನ್ನ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದನು. ಕಳೆದ ಒಂದು ತಿಂಗಳ ಹಿಂದೆಯಷ್ಟೆ ಕಾಂತಯ್ಯನಪಾಳ್ಯಕ್ಕೆ ಬಂದು ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದನು.
ತಡರಾತ್ರಿ ತನ್ನ ತಂದೆ ಹಾಗೂ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗುವ ಮೂಲಕ ನಾಪತ್ತೆಯಾಗಿದ್ದನು.

ಮನೆಯಲ್ಲಿ ತನ್ನ ತಾಯಿಯೊಂದಿಗೆ ಮಲಗಿದ್ದ ಈತನ ಪುತ್ರಿ ಎರಡು ವರ್ಷದ ಕೀರ್ತನ ಬೆಳಿಗ್ಗೆ ಎದ್ದು ರಕ್ತಮಡುವನ್ನು ನೋಡಿ ತನ್ನ ಅಜ್ಜಿ ಮನೆಗೆ ಹೋಗಿ ನಾಯಿ ಗಲೀಜು ಮಾಡಿದೆ ಎಂದು ಹೇಳಿದೆ. ತಕ್ಷಣ ಸ್ಥಳಕ್ಕೆ ಅಜ್ಜಿ ಬಂದು ನೋಡಿದಾಗ ಇಬ್ಬರ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಮಗನೇ ತಂದೆ ಮತ್ತು ಪತ್ನಿಯನ್ನು ಕೊಲೆಗೈದಿರುವ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ತಿರುವುದು ಪಡೆದುಕೊಳ್ಳುತ್ತಿದ್ದು, ನಾಪತ್ತೆಯಾಗಿದ್ದ ಆರೋಪಿ ನಾರಾಯಣಸ್ವಾಮಿ ಸಿರಾ ಪೊಲೀಸರಿಗೆ ಶರಣಾಗುವ ಮೂಲಕ ಇವರಿಬ್ಬರನ್ನೂ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆನ್ನಲಾಗಿದೆ.

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಜತೆ ಜಗಳವಾಡಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮಾರಕಾಸ್ತ್ರದಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಆ ಸಂದರ್ಭದಲ್ಲಿ ತಡೆಯಲು ಬಂದ ಪತ್ನಿಗೂ ಮಚ್ಚು ಬೀಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಿರಾ ಪೊಲೀಸರಿಗೆ ಶರಣಾಗಿರುವ ಆರೋಪಿ ನಾರಾಯಣನನ್ನು ವಶಕ್ಕೆ ಪಡೆಯಲು ಕುಣಿಗಲ್ ಪೊಲೀಸರು ಸಿರಾಕ್ಕೆ ದೌಡಾಯಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಕುಣಿಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Comment