ತಂದೆ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

ಮಂಗಳೂರು, ಅ.೧೨- ತಂದೆಯ ಕೊಲೆ, ಅಣ್ಣನ ಕೊಲೆಯತ್ನ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಅಜೆಕಾರು ನಿವಾಸಿ ಡಾಲ್ಫಿ ಗೋವಿಯಸ್(೪೧) ಎಂಬಾತನಿಗೆ ಜೀವಿತಾವಧಿ ಕಠಿಣ ಜೈಲುಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಆರೋಪಿಗೆ ತಂದೆ ಕೊಲೆ ಪ್ರಕರಣದಲ್ಲಿ ಕಠಿಣ ಜೀವಾವಧಿ ಶಿಕ್ಷೆ ಮತ್ತು ೧೦ ಸಾವಿರ ರೂ.ದಂಡ ಪಾವತಿಸಲು ತಪ್ಪಿದರೆ ೬ ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಸಾಕ್ಷ್ಯನಾಶ ಪ್ರಕರಣದಲ್ಲಿ ೧೦ ವರ್ಷ ಕಠಿಣಶಿಕ್ಷೆ, ೧೦ ಸಾವಿರ ರೂ. ದಂಡ. ದಂಡ ತೆರಲು ತಪ್ಪಿದರೆ ೬ ತಿಂಗಳು ಸಜೆ ವಿಧಿಸಲಾಗಿದೆ. ಅಲ್ಲದೆ ಗಾಯಾಳು ಆಗಿದ್ದ ಅಣ್ಣ ಸ್ಟ್ಯಾನಿ ಗೋವಿಯಸ್‌ಗೆ ಪರಿಹಾರವಾಗಿ ೫೦ ಸಾವಿರ ರೂ. ಹಣವನ್ನು ಒಂದು ತಿಂಗಳ ಒಳಗೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
೨೦೦೭ರ ಎಪ್ರಿಲ್ ೪ ರಂದು ಸಂಜೆ ಮಂಗಳೂರು ತಾಲೂಕಿನ ಹೊಸಬೆಟ್ಟು ಕರಿಂಗಾನ ಎಂಬಲ್ಲಿ ವಾಸವಿದ್ದ ತನ್ನ ತಂದೆಯ ಮನೆಗೆ ಬಂದ ಡಾಲ್ಫಿ ಗೋವಿಯಸ್ ತನ್ನ ತಂದೆಯಾದ ಪೌಲ್ ಗೋವಿಯಸ್(೮೩)ರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆಸ್ತಿಯ ವಿಚಾರದ ವೈಷಮ್ಯದಿಂದಾಗಿ ಈ ಕೊಲೆ ನಡೆದಿತ್ತು. ತಂದೆಯನ್ನು ಕೊಲೆಗೈದ ಬಳಿಕ ತನ್ನ ಅಣ್ಣ ಸ್ಟ್ಯಾನಿ(೫೪) ಬರುವವರೆಗೂ ಕಾದು, ಆತ ಮನೆ ಪ್ರವೇಶಿಸುತ್ತಿದ್ದಂತೆಯೇ ಕತ್ತಿಯಿಂದ ಗಂಭೀರವಾಗಿ ಹಲ್ಲೆಗೈದಿದ್ದ. ಅಲ್ಲದೆ ಮನೆಯಲ್ಲಿನ ಸಿಸಿಟಿವಿ ಕಿತ್ತೆಸೆದು ರಾದ್ಧಾಂತ ಮಾಡಿದ್ದ. ಈ ಪ್ರಕರಣ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕೊಲೆ, ಹಲ್ಲೆ, ಸಾಕ್ಷ್ಯ ನಾಶ ಕುರಿತಂತೆ ಪೊಲೀಸರು ಆರೋಪಿಯ ಮೇಲೆ ಕೇಸ್ ದಾಖಲಿಸಿಕೊಂಡಿದ್ದರು.
ಅಂದಿನ ಮೂಡಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರದ ಪರವಾಗಿ ೩೬ ಸಾಕ್ಷಿಗಳನ್ನು ವಿಚಾರಿಸಲಾಗಿತ್ತು. ನ್ಯಾಯಾಧೀಶರಾದ ಕೆ.ಎಸ್.ಬೀಳಗಿಯವರು ವಿಚಾರಣೆ ನಡೆಸಿದ್ದರು. ಇದೀಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರು ಮುಂದಿನ ವಿಚಾರಣೆ ನಡೆಸಿದ್ದು, ಡಾಲ್ಫಿ ಗೋವಿಯಸ್ ಆರೋಪಿ ಎಂಬುದು ಸಾಬೀತಾಗಿತ್ತು. ಸರಕಾರದ ಪರವಾಗಿ ಪುಷ್ಪರಾಜ್ ಅಡ್ಯಂತಾಯ ವಾದ ಮಂಡಿಸಿದ್ದರು.

Leave a Comment