ತಂದೆಯ ನಿಧನದ ನಂತರ ಬಿಜೆಪಿ ಬೇರೆಯೇ ದಿಕ್ಕಿನಲ್ಲಿ ಸಾಗುತ್ತಿದೆ: ಉತ್ಪಲ್ ಪಾರಿಕ್ಕರ್

ಪಣಜಿ, ಜು.11: ಗೋವಾದ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿರುವ ಅನಿರೀಕ್ಷಿತ ವಿದ್ಯಮಾನದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಮನೋಹರ್ ಪಾರಿಕ್ಕರ್ ಅವರ ಪುತ್ರ ಉತ್ಪಲ್ ಪಾರಿಕ್ಕರ್, ತಮ್ಮ ತಂದೆಯ ಮರಣಾನಂತರ ಕೇಸರಿ ಪಕ್ಷ ಬೇರೆಯೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದಾರೆ.

ತಮ್ಮ ತಂದೆಯ ನಿಧನ ನಂತರ ಅವರ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಉತ್ಪಲ್ ಉತ್ಸುಕರಾಗಿದ್ದರೂ ಪಕ್ಷ ಅವರಿಗೆ ಅವಕಾಶ ನೀಡಿರಲಿಲ್ಲ. ಈ ಕ್ಷೇತ್ರದಲ್ಲಿ ಮೇ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಅಟನಾಸಿಯೊ ಮೊನ್ಸೆರ್ರೆಟ್ ಜಯ ಗಳಿಸಿದ್ದರು. ಬುಧವಾರ ಸಂಜೆ ಬಿಜೆಪಿ ಸೇರಿದ ಹತ್ತು ಕಾಂಗ್ರೆಸ್ ಶಾಸಕರ ಪೈಕಿ ಅಟನಾಸಿಯೊ ಕೂಡ ಸೇರಿದ್ದಾರೆ.

‘ಮನೋಹರ್ ಪಾರಿಕ್ಕರ್ ಅವರ ಕಾಲದಲ್ಲಿ ವಿಶ್ವಾಸ ಮತ್ತು ಬದ್ಧತೆ ಬಿಜೆಪಿಯಲ್ಲಿದ್ದರೆ ಆ ನಿಲುವು ಮಾರ್ಚ್ 17ರಂದು ಅಂತ್ಯವಾಗಿದೆ (ಮನೋಹರ್ ಪರಿಕ್ಕರ್ ನಿಧನರಾದ ದಿನ)” ಎಂದು ಉತ್ಪಲ್ ಹೇಳಿದ್ದಾರೆ.

ಬಿಜೆಪಿ ಈಗ ಸಾಗಿರುವ ಹಾದಿ ಸರಿಯಾದ ಹಾದಿಯೇ ಎಂದು ಸಮಯವೇ ನಿರ್ಧರಿಸುವುದು ಎಂದ ಉತ್ಪಲ್, ತಾವು ಬಿಜೆಪಿಯಲ್ಲಿಯೇ ಉಳಿದುಕೊಂಡು ಪಕ್ಷದ ಹಿರಿಯರನ್ನು ಬೆಂಬಲಿಸುವುದಾಗಿ ತಿಳಿಸಿದರು.

ತಮ್ಮ ತಂದೆಯ ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ಶಾಸಕ ಬಿಜೆಪಿ ಸೇರಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ಮುಂದಿನ ಎರಡು ವರ್ಷಗಳಲ್ಲಿ ತಾವೆಲ್ಲಿರಬಹುದು ಎಂಬುದು ಅವರಿಗೆ ತಿಳಿದಿರುವುದಿಲ್ಲ” ಎಂದಷ್ಟೇ ಹೇಳಿದರು.

Leave a Comment