ತಂತ್ರಜ್ಞಾನಗಳಿಂದ ಬದುಕು ಸುಖಮಯ

ಹರಪನಹಳ್ಳಿ.ಸೆ.3; ಆಧುನಿಕ ಜ್ಞಾನ, ತಂತ್ರಜ್ಞಾನಗಳಿಂದ ಬದುಕು ಸುಖಕರವಾಗಿದೆ. ಆದರೆ ವ್ಯಕ್ತಿ ತನ್ನ ಅಂತರಂಗವನ್ನು ಶುದ್ಧಿ ಮಾಡಿಕೊಳ್ಳದೆ ಬಹಿರಂಗ ಶುದ್ಧಿಗೆ ಯಾವ ಮಹತ್ವವೂ ಇಲ್ಲ. ಬಹಿರಂಗದಂತೆ ಅಂತರಂಗವೂ ಕೊಳಕಾಗಿದೆ ಎಂದು ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಅಣಜಿಗೆರೆ ಗ್ರಾಮದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಇಂದು ಈ ಕೊಳಕಿಗೆ ಕಾರಣವನ್ನು ಇನ್ನೊಬ್ಬರ ಮೇಲೆ ಹಾಕುತ್ತಿದ್ದೇವೆ. ಶರಣರು ಯಾವುದಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಲಿಲ್ಲ. ವಚನ ಸಾಹಿತ್ಯ ವಚನಕಾರರ ಸಾಕ್ಷಿಪ್ರಜ್ಞೆಯ ಸಂಕೇತಗಳು. ಇಂದು ನಾವು ಸಾಕ್ಷಿಪ್ರಜ್ಞೆಯನ್ನೇ ಕೊಂದು ಹಾಕಿದ್ದೇವೆ. ಹಾಗಾಗಿ ರಾಜಕಾರಣಿಗಳು, ಸ್ವಾಮಿಗಳು, ಪುರೋಹಿತರು ವಿಜೃಂಭಿಸುತ್ತಿದ್ದಾರೆ. ಸಮ ಸಮಾಜದ ಸೃಷ್ಟಿ ಮನಸ್ಸಿನ ಒಬ್ಬ ಇನ್ನೊಬ್ಬರನ್ನು ಪ್ರೀತಿಸುವ ಹ್ಲದಯ ವೈಶಾಲ್ಯತೆಯನ್ನು ಪ್ರೀತಿಸಿದರೆ ಮಾತ್ರ ಸಮ ಸಮಾಜ ಸೃಷ್ಠಿಸಲು ಸಾಧ್ಯ. ಶರಣರದ್ದು ಸಮ ಸಮಾಜದ ಕನಸಲ್ಲ; ನನಸು. ಅವರು ಕಂಡ ನನಸು ಇಂದು ಮತ್ತೆ ಕನಸಾಗಿದೆ. ಈ ಕನಸು ಮತ್ತೆ ನನಸಾಗುವಂತೆ ನಾವೆಲ್ಲರೂ ಪ್ರಯತ್ನಿಸಬೇಕು. ಮೇಲು-ಕೀಳುಗಳು ಇಂದು ನಿನ್ನೆಯವಲ್ಲ; ತಲತಲಾಂತರದಿಂದ ಇಡೀ ಜಗತ್ತಿನಲ್ಲಿಯೇ ಹಾಸುಹೊಕ್ಕಾಗಿವೆ. ಎಷ್ಟೇ ಮುಂದುವರಿದ ದೇಶವಾಗಿದ್ದರೂ ಅಲ್ಲಿಯೂ ನೂರೆಂಟು ಅಸಮಾನತೆಗಳು ಇನ್ನೂ ವಿಜೃಂಭಿಸುತ್ತಿವೆ. ಆ ಜಾತಿ-ಈ ಜಾತಿ, ಆ ಧರ್ಮ-ಈ ಧರ್ಮ, ಆ ಭಾಷೆ-ಈ ಭಾಷೆ, ಬಡವ-ಶ್ರೀಮಂತ, ಜಾಣ-ದಡ್ಡ, ಕಪ್ಪು-ಬಿಳುಪು, ಗಂಡು-ಹೆಣ್ಣು, ಮಲೆನಾಡು-ಬಯಲು.. ಮತ್ತೆ ಇವು ಒಡೆದು ಒಂದೇ ಧರ್ಮಧಲ್ಲಿಯೇ ಬೇರೆ ಬೇರೆ ಜಾತಿ!.. ಹೀಗೆ ಒಂದೇ ಎರಡೇ ಸಾವಿರಾರು ಅಸಮಾನತೆಗಳು ನಮ್ಮನ್ನು ಕಾಡುತ್ತಿವೆ. ಹೊರಗಿರಲಿ ನಮ್ಮ ದೇಹದಲ್ಲಿಯೇ ಬಲಗೈ, ಬಲಗಾಲು ಶ್ರೇಷ್ಠ? ಎಡಗೈ, ಎಡಗಾಲು ಕನಿಷ್ಠ! ತಲೆ ಶ್ರೇಷ್ಠ-ಪಾದ ಕನಿಷ್ಠ! ಎಲ್ಲೆಲ್ಲಿ ಒಡೆಯಲು ಸಾಧ್ಯವೋ ಅಲ್ಲೆಲ್ಲ ಒಡೆದಾಗಿದೆ. ಎಷ್ಟೆಷ್ಟು ಹಸಗೆಡಿಸಲು ಸಾಧ್ಯವೋ ಅಷ್ಟೂ ಹದಗೆಡಿಸಿಯಾಗಿದೆ. ಈ ಎಲ್ಲ ತಾರತಮ್ಯಗಳಿರುವುದು ಪ್ರಕೃತಿಯ ಕರೀಟ ಎಂದು ಬೀಗುವ ಮನುಷ್ಯರಲ್ಲಿ! ಬೇರೆ ಪ್ರಾಣಿ ಪಕ್ಷಿಗಳು ತಮ್ಮ ಪಾಡಿಗೆ ತಾವು ಹಾಯಾಗಿ ಬದುಕುತ್ತಿವೆ. ಅವುಗಳಿಲ್ಲಿ ಇಲ್ಲದ ಜಾತಿ ನಮಗೆ ಬೇಕೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಈ ಜಾತಿಯನ್ನು ಮಾಡಿರುವುದು ಸಾಮಾನ್ಯರಲ್ಲ; ಅಸಾಮಾನ್ಯರು, ಶ್ರೇಷ್ಠರು ಎಂದು ಕರೆಸಿಕೊಳ್ಳುವ ಜನರಿಂದ. ಶ್ರೇಷ್ಠತೆ; ಆಚಾರ-ವಿಚಾರಗಳಿಂದ ಬರುತ್ತದೆಯೇ ಹೊರತು ಹುಟ್ಟಿದ ಜಾತಿಯಿಂದಲ್ಲ.
ನಮ್ಮ ಮಠದ ಮೂಲ ಪುರುಷ ಮರುಳಸಿದ್ಧ ಜಾತಿಯಿಂದ ಮಾದರವ. ಆದರೆ ತನ್ನ ರೀತಿ-ನೀತಿ ನಡವಳಿಕೆಗಳಿಂದ ವಿಶ್ವಬಂಧುವಾದವ. ಈ ರೀತಿ ನಾವು ನಮ್ಮ ನಮ್ಮ ಜಾತಿಯನ್ನು ಮೀರಿದಂತೆ ನಡೆದುಕೊಂಡು ಮಹತ್ಮರಾಗಲು ಸಾಧ್ಯ. ಶರಣರು ಕಂಡ ಸಮ ಸಮಾಜದ ಕನಸು ನನಸಾಗುವಲ್ಲಿ ನಮ್ಮಲ್ಲಿನ ಇಚ್ಛಾಶಕ್ತಿ ಕಡಿಮೆಯಾಗಿರುವುದೇ ಕಾರಣ. ನನ್ನ ಉದ್ದಾರದ ಶಿಲ್ಪಿ ನಾನೇ ಎನ್ನುವ ಮನೋಭಾವ ನಮ್ಮಲ್ಲಿ ಬಲವಾಗಬೇಕು ಎಂದರು.
ಅಧ್ಯಾಪಕ ಕೆ ಎಂ ಭರಮನಗೌಡ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಿ ಎನ್ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಣೇಹಳ್ಳಿಯ ಶಿವಸಂಚಾರದ ದಾಕ್ಷಾಯಣ ಕೆ, ನಾಗರಾಜ್ ಹೆಚ್ ಎಸ್ ಮತ್ತು ಸತೀಶ್ ತಂಡದವರು ವಚನಗೀತೆ ಹಾಡಿದರು. ಸ್ಥಳೀಯ ಶಾಲಾಮಕ್ಕಳು ವಚನ ನೃತ್ಯರೂಪಕಗಳನ್ನು ಪ್ರಸ್ತುತ ಪಡಿಸಿದರು.

Leave a Comment