ತಂಡ ಸೋತರೂ ರವಿಶಾಸ್ತ್ರಿ ಮೆಚ್ಚುಗೆ

ಲಂಡನ್, ಸೆ ೬- ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಸೋತಿದ್ದರೂ ಅದು ತಂಡದ ಕೋಚ್ ರವಿಶಾಸ್ತ್ರಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ.

ಸೌತಂಪ್ಟನ್ ನಾಲ್ಕನೇ ಟೆಸ್ಟ್ ನಲ್ಲಿ ಭಾರತದ ತಂಡ ೬೦ ರನ್‌ಗಳಿಂದ ಸೋಲು ಕಂಡಿದೆ. ಆದರೆ ಸಾಗರೋತ್ತರ ದೇಶದಲ್ಲಿ ಭಾರತ ಕಳೆದ ೧೫ರಿಂದ ೨೦ ವರ್ಷಗಳಲ್ಲಿ ತೋರಿದ ಪ್ರದರ್ಶನಕ್ಕಿಂತ ಈ ತಂಡ ಉತ್ತಮವಾಗಿ ಆಡಿದೆ ಎಂದು ಶಾಸ್ತ್ರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಮ್ಮ ತಂಡದ ಆಟಗಾರರು ಕಠಿಣ ಪರಿಶ್ರಮ ವಹಿಸಿ ಆಡಿದ್ದಾರೆ. ಅವರ ಮುಂದಿನ ಸಾಹಸ ಚೆನ್ನಾಗಿ ಆಟವಾಡಿ ಗೆಲ್ಲುವುದು. ಕಳೆದ ಮೂರು ವರ್ಷಗಳಿಗೆ ಹೋಲಿಸಿ ನೋಡಿದರೆ ನಾವು ಸಾಗರೋತ್ತರ ದೇಶದಲ್ಲಿ ೯ ಪಂದ್ಯಗಳನ್ನು ಹಾಗೂ ಮೂರು ಸರಣಿಗಳನ್ನು ಗೆದ್ದಿದ್ದೇವೆ. ಮಾತ್ರವಲ್ಲ, ಕಳೆದ ೧೫-೨೦ ವರ್ಷಗಳಲ್ಲಿ ಭಾರತದ ಯಾವ ತಂಡವೂ ಕಡಿಮೆ ಅವಧಿಯಲ್ಲಿ ನಮ್ಮಷ್ಟು ರನ್ ಗಳಿಸಿದ್ದನ್ನು ನಾನು ಕಂಡಿಲ್ಲ ಎಂದು ಹೇಳಿದ್ದಾರೆ.

ಈ ಸರಣಿಯಲ್ಲಿ ಭಾರತದ ಬೌಲಿಂಗ್ ಪ್ರಭಾವಶಾಲಿಯಾಗಿತ್ತು. ಎರಡನೇ ಟೆಸ್ಟ್ ಬಿಟ್ಟರೆ ಉಳಿದ ಮೂರು ಟೆಸ್ಟ್ ಭಾರತದ ಪರವಾಗಿಯೇ ಇದ್ದವು. ಆದರೆ, ಬ್ಯಾಟಿಂಗ್? ವೈಫಲ್ಯ ಅನುಭವಿಸಿ ೩-೧ರಿಂದ ಗೆಲ್ಲಬೇಕಿದ್ದ ತಂಡ ಸೋಲನುಭವಿಸಬೇಕಾಯಿತು ಎಂದಿದ್ದಾರೆ.

ಸರಣಿ ಕಳೆದುಕೊಂಡಿರುವ ನಮಗೆ ಈಗ ಉಳಿದುಕೊಂಡಿರುವುದು ೫ನೇ ಪಂದ್ಯ ಗೆಲ್ಲುವ ಗುರಿಯೊಂದೇ. ಈ ಪಂದ್ಯದಲ್ಲಿ ಕಳೆದ ಪಂದ್ಯಗಳ ತಪ್ಪುಗಳನ್ನು ತಿದ್ದುಕೊಂಡು,ಉತ್ತಮ ಪ್ರದರ್ಶನ ನೀಡಿ ೩-೨ ರಲ್ಲಿ ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಕೆಲವು ಶ್ರೇಷ್ಠ ಕ್ರಿಕೆಟ್ ಪಟುಗಳು ಆಟ ಆಡುತ್ತಿರುವುದರಿಂದ ಗೆಲ್ಲುವ ಭರವಸೆ ಇದೆ. ಆದರೆ ಅವರು ಇನ್ನಷ್ಟು ಮಾನಸಿಕ ಸ್ಥೈರ್ಯ ತಂದುಕೊಳ್ಳಬೇಕು ಎಂದು ರವಿಶಾಸ್ತ್ರಿ ಅವರು ತಂಡವನ್ನು ಹುರಿದುಂಬಿಸುವ ಮಾತುಗಳನ್ನು ಆಡಿದ್ದಾರೆ.

Leave a Comment