ಡ್ರಗ್ಸ್ ಜಾಲ: ದೀಪಕ್ ರಾವ್ ಹಂತಕನ ಸಹಿತ ೩ ಸೆರೆ ಮೂಲ್ಕಿ ಸಮೀಪ ಸಿಸಿಬಿ ಕಾರ್ಯಾಚರಣೆ

ಮಂಗಳೂರು, ಫೆ.೧೦- ನಿಷೇಧಿತ ಮಾದಕ ವಸ್ತು ಆಗಿರುವ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಮೂವರನ್ನು ಕಾರ್ ಸಮೇತ ವಶಕ್ಕೆ ಪಡೆಯುವಲ್ಲಿ ಸಿಸಿಬಿ ಹಾಗೂ ಇಕಾನಾಮಿಕ್-ನಾರ್ಕೋಟಿಕ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕಾಟಿಪಳ್ಳ ೨ನೇ ಬ್ಲಾಕ್ ನಿವಾಸಿ ಅಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಅನಾಸ್(೨೭) ಚೊಕ್ಕಬೆಟ್ಟು ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಶರೀಫ್(೪೦) ಹಾಗೂ ಕಾಟಿಪಳ್ಳ ೨ನೇ ಬ್ಲಾಕ್ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಮುಹಮ್ಮದ್ ಶಾಫಿ ಯಾನೆ ಚಪ್ಪಿ(೩೩) ಎಂದು ಹೆಸರಿಸಲಾಗಿದೆ.
ಆರೋಪಿಗಳು ಐಶಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಮಾದಕ ವಸ್ತುವನ್ನು ಮುಂಬೈಯಿಂದ ಖರೀದಿಸಿ ಮಂಗಳೂರಿಗೆ ತಂದು ಮಾರಾಟ ಮಾಡುವ ಉದ್ದೇಶದಿಂದ ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಹಾಗೂ ಇಕಾನಾಮಿಕ್-ನಾರ್ಕೋಟಿಕ್ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮೂಲ್ಕಿ ಬಳಿ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಆರೋಪಿಗಳಿಂದ ರೂ. ೮೭,೫೬೦ ಮೌಲ್ಯದ ಎಂಡಿಎಂಎ ಮಾದಕ ವಸ್ತು, ೩ ಮೊಬೈಲ್ ಫೋನ್ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬಿಎಂಡಬ್ಲೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ೫೧,೧೨,೫೬೦ ರೂ. ಅಂದಾಜಿಸಲಾಗಿದೆ.
ಆರೋಪಿಗಳ ಪೈಕಿ ಮುಹಮ್ಮದ್ ಶರೀಫ್ ಸಿದ್ದಿಕ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುವನ್ನು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಮೊಹಮ್ಮದ್ ಶಾಪಿ ಯಾನೆ ಚಪ್ಪಿ ಎಂಬಾತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸ್ ಆಯುಕ್ತ ಹರ್ಷ, ಪೊಲೀಸ್ ಉಪ ಆಯುಕ್ತ ಲಕ್ಷ್ಮಿಗಣೇಶ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್, ಪಿಎಸ್‌ಐ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿ ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಯ ಪಿಎಸ್‌ಐ ಲತಾ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Comment