ಡೆಂಗ್ಯೂ ಜ್ವರಕ್ಕೆ ಜನತೆ ತತ್ತರ: ಕುಂಭಕರ್ಣ ನಿದ್ರೆಯಲ್ಲಿ ಪುರಸಭೆ

ಕುಣಿಗಲ್, ಜು. ೧೭- ಪಟ್ಟಣದಲ್ಲಿ ಮಹಾಮಾರಿ ಡೆಂಗ್ಯೂ ಜ್ವರಕ್ಕೆ 3-4 ಸಾವಿರ ಜನ ತುತ್ತಾಗಿದ್ದು, ಪುರಸಭೆ ಕಣ್ಮುಚ್ಚಿ ಕುಳಿತಿದೆ. ಆಡಳಿತ ಸಂಪೂರ್ಣವಾಗಿ ಕುಸಿದಿದೆ ಎಂದು ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಿಸಿದರು.

ಇಲ್ಲಿನ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷೆ ನಳಿನಾ ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ಮೇಲೆ ಗರಂ ಆದರು.

ಕೆಶಿಪ್‌ನವರು ಮದ್ದೂರು ಮತ್ತು ತುಮಕೂರು ರಸ್ತೆ ನಿರ್ಮಿಸುತ್ತಿದ್ದಾರೆ. ಅದು ಅರ್ಧಕ್ಕೆ ನಿಂತಿದೆ. ಅಲ್ಲಿ ಚರಂಡಿ ನಿರ್ಮಿಸಿಲ್ಲ. ಜನತೆ ಡೆಂಗ್ಯೂ ಜ್ವರದಿಂದ  ನರಳುತ್ತಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.

ಪಟ್ಟಣದ ತುಮಕೂರು ರಸ್ತೆ ಮತ್ತು ಮದ್ದೂರು ರಸ್ತೆಯಲ್ಲಿ ಸ್ಥಗಿತಗೊಂಡಿದೆ. ಚರಂಡಿ ನಿರ್ಮಾಣಕ್ಕೆ ತೆಗೆದಿರುವ ಗುಂಡಿಗಳು ಹಾಗೆಯೇ ಉಳಿದಿವೆ. ಚರಂಡಿ ನಿರ್ಮಾಣಕ್ಕೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಇದರಿಂದ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದ್ದು, ಜನತೆ ಡೆಂಗ್ಯೂ ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಮೊದಲು ಇದನ್ನು ಬಗೆಹರಿಸುವಂತೆ ಸದಸ್ಯರಾದ  ಚಂದ್ರು, ಪಾಪಣ್ಣ, ಅನ್ಸರ್‌ಪಾಷಾ, ಮಂಜು, ರಾಮು ಒತ್ತಾಯಿಸಿದರು.

ಸದಸ್ಯ ರೆಹಮಾನ್ ಷರೀಫ್ ಮಾತನಾಡಿ, ಪ್ರತಿಭಟನೆ ಮಾಡುವ ಮೊದಲು ಅಧಿಕಾರಿಗಳಿಗೆ ಪುರಸಭೆ ವತಿಯಿಂದ ನೋಟೀಸ್ ಜಾರಿಗೊಳಿಸಬೇಕು. ಅಲ್ಲದೆ,  ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಬೇಕು. ಇದಕ್ಕೂ ಅಧಿಕಾರಿಗಳು ಬೆಲೆ ಕೊಡದಿದ್ದರೆ ಬಳಿಕ ಹೋರಾಟ ಮಾಡೋಣ ಎಂದು ಸಲಹೆ ನೀಡಿದರು.

ಡೆಂಗ್ಯೂ ನಿಯಂತ್ರಣಕ್ಕೆ ಪಟ್ಟಣದಲ್ಲಿ ಫಾಗಿಂಗ್ ಮಾಡಿಸಲಾಗುತ್ತಿದೆ. ಆದರೆ, ಸರ್ಕಾರದ ಮಾರ್ಗಸೂಚಿಯಂತೆ ಸೊಳ್ಳೆಗಳನ್ನು ಸಾಯಿಸಲು ಕಳಪೆ ಔಷಧವನ್ನು ಬಳಸಲಾಗುತ್ತಿದೆ. ಇದರಿಂದ ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಕ್ರಿಯಾಲೋಪ ಎತ್ತಿದ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಮುಖ್ಯಾಧಿಕಾರಿಗಳು ಕಾಟಾಚಾರಕ್ಕೆ ಇಂತಹ ಕೆಲಸ ಮಾಡಿಸುತ್ತಿದ್ದಾರೆ. ಡೆಂಗ್ಯೂ ನಿಯಂತ್ರಣಕ್ಕೆ ಫಾಗಿಂಗ್ ಮಾಡಲು ಇಂತಹದೇ ಔಷಧವನ್ನು ಬಳಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ ಎಂದರು.

ಪುರಸಭೆ ಮುಂಭಾಗ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಐಡಿಎಸ್‍ಎಂಟಿ ಮಳಿಗೆಯಲ್ಲಿನ ಕೆಲ ಕೊಠಡಿಗಳನ್ನು ಹರಾಜು ಮಾಡಿ ಕೊಡಲಾಗಿದೆ. ಇನ್ನೂ ಕೆಲವನ್ನು ಕಾನೂನು ಬಾಹಿರವಾಗಿ ಹರಾಜು ಪ್ರಕ್ರಿಯೆ ಮಾಡದೆ ಕೊಠಡಿಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ನೀಡಿರುವುದಕ್ಕೆ ಯಾವುದೇ ದಾಖಲೆಗಳನ್ನು ಪುರಸಭೆ ಇಟ್ಟಿಲ್ಲ ಎಂದು ಸದಸ್ಯ ಈ. ಮಂಜು ಆರೋಪಿಸಿದರು. ಇದನ್ನು ಒಂದು ತಿಂಗಳಲ್ಲಿ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಧ್ಯಕ್ಷೆ ನಳಿನಾ ಅವರು ತಮ್ಮ ನಿವೇಶನದ ವಿಸ್ತೀರ್ಣವನ್ನು ಜಾಸ್ತಿ ಮಾಡಿಕೊಂಡಿದ್ದಾರೆ. ಇದು ಅಪರಾಧ. 220*50 ಅಡಿಗಳಷ್ಟು ಜಾಸ್ತಿ ಮಾಡಿಕೊಂಡಿರುವುದು ಸರಿಯೇ ಎಂದು ಕೆ.ಎಲ್.ಹರೀಶ್  ಪ್ರಶ್ನಿಸಿದರು. ಇದಕ್ಕೆ ಸದಸ್ಯ ರಂಗಸ್ವಾಮಿ ಕೂಡ ಧ್ವನಿಗೂಡಿದರು.

ನನಗೆ ಯಾರ ಆಸ್ತಿಯೂ ಬೇಕಾಗಿಲ್ಲ. ನನ್ನ ಗಂಡ ಮತ್ತು ಮಾವ ಸಂಪಾದಿಸಿರುವ ಆಸ್ತಿಯೇ ಸಾಕು. ಯಾರೋ ಉದ್ದೇಶಪೂರ್ವಕವಾಗಿ ವಿಸ್ತೀರ್ಣ ಜಾಸ್ತಿ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ಪಂಕಜಾ ರೆಡ್ಡಿ ಮಾತನಾಡಿ, ಈ ಬಗ್ಗೆ ಕಡತ ಪರಿಶೀಲಿಸಿ ಯಾರ ಅಧಿಕಾರ ಅವಧಿಯಲ್ಲಿ ತಪ್ಪು ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಸದಸ್ಯರಾದ ಶಂಕರ್, ವಿಜಯಮ್ಮ, ಸರಸ್ವತಿ, ಜಯಲಕ್ಷ್ಮಿ, ಮಂಜುಳಾ, ಪಾಪಣ್ಣ, ಸತೀಶ್, ಇಂಜಿನಿಯರ್ ನರಸೇಗೌಡ, ರೂಪ, ಜಗರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment