ಡೆಂಗೆ ಔಷಧಿ ಸಂಶೋಧನೆ ಯಶಸ್ವಿ

ನವದೆಹಲಿ, ಏ ೧೬- ವಿಶ್ವದಲ್ಲೇ ಮೊದಲ ಬಾರಿ ಭಾರತೀಯ ವಿಜ್ಞಾನಿಗಳು ಡೆಂಗ್ಯುಗೆ ಔಷಧಿ ಕಂಡು ಹಿಡಿದಿದ್ದಾರೆ. ಈ ಔಷಧಿ ಮೇಲೆ ನಡೆದ ಪ್ರಯೋಗ ಯಶಸ್ವಿಯಾಗಿದ್ದು, ಶೀಘ್ರದಲ್ಲಿ ಮಾರುಕಟ್ಟೆಗೆ ಈ ಔಷಧಿ ಲಗ್ಗೆ ಇಡಲಿದೆ.

ಮಾರುಕಟ್ಟೆಗೆ ಔಷಧಿ ಬರುವ ಮುನ್ನ ಜಾಗತಿಕ ಮಟ್ಟದಲ್ಲಿ ನಡೆಯುವ ಗುಣಮಟ್ಟದ ಪರೀಕ್ಷೆ ನಡೆಯುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಡೆಂಗೆಯಿಂದ ಬಳಲುತ್ತಿದ್ದ ರೋಗಿಗಳಿಗೆ ೨೦೧೯ರ ಸುಮಾರಿಗೆ ಮಾರುಕಟ್ಟೆಯಲ್ಲಿ ಈ ಔಷಧಿ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಸಂಪೂರ್ಣವಾಗಿ ಆಯುರ್ವೇದದ ಈ ಔಷಧಿಗೆ ೭ ರೀತಿಯ ಔಷಧಿ ಸಸ್ಯವನ್ನು ಬಳಸಲಾಗಿದ್ದು, ಆಯುಶ್ ಸಚಿವಾಲಯದ ಸಿ ಸಿ ಆರ್ ಎಸ್ ವಿಜ್ಞಾನಿಗಳು ಇದನ್ನು ಸಿದ್ಧಪಡಿಸಿದ್ದಾರೆ.

ಈ ಔಷಧಿ ತಯಾರಿಸಲು ಒಂದು ಡಜನ್‌ಗಿಂತಲೂ ಹೆಚ್ಚು ಸಂಶೋಧಕರಿಗೆ ೨ ವರ್ಷ ಹಿಡಿದಿದೆ ಎನ್ನಲಾಗಿದೆ. ಸಿ ಸಿ ಆರ್ ಎಸ್ ಫಲಿತಾಂಶದ ನಂತ್ರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಔಷಧಿ ತಯಾರಿಸಲು ಶುರು ಮಾಡಿದೆ. ಕೋಲಾರದ ಮೆಡಿಕಲ್ ಕಾಲೇಜಿನಲ್ಲಿ ಡೆಂಗೆಯಿಂದ ಬಳಲುತ್ತಿದ್ದ ರೋಗಿಗಳಿಗೆ ಔಷಧಿ ನೀಡಿ ಪರೀಕ್ಷೆ ನಡೆಸಲಾಗಿದೆ. ಔಷಧಿ ಪಡೆದ ನಂತರ ರೋಗಿಗಳ ರಕ್ತದಲ್ಲಿ ಪ್ಲೇಟ್ಲೆಟ್ ಪ್ರಮಾಣ ಹೆಚ್ಚಾಗಿದೆಯಂತೆ ಹಾಗೂ ರೋಗಿಗಳ ಮೇಲೆ ಯಾವುದೇ ಅಡ್ಡಪರಿಣಾಮ ಬೀರಿಲ್ಲ ಎನ್ನಲಾಗಿದೆ.

ಈವರೆಗೆ ಡೆಂಗ್ಯುಗೆ ಯಾವುದೇ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಜ್ವರ ಕಡಿಮೆ ಮಾಡಲು ವೈದ್ಯರು ಔಷಧಿ ನೀಡುತ್ತಾರೆ. ಪ್ಲೇಟ್ಲೆಟ್ ಹೆಚ್ಚಿಸಿಕೊಳ್ಳಲು ದ್ರವ ಪದಾರ್ಥ ಸೇವನೆ ಮಾಡುವಂತೆ ಸಲಹೆ ನೀಡುತ್ತಿದ್ದರು.

Leave a Comment