ಡಿ. 3 ಬೆಳಗಾವಿಯಲ್ಲಿ ಅಧಿವೇಶನ

ಬೆಂಗಳೂರು, ಅ. ೧೧- ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುವ ಬಗ್ಗೆ ಉಂಟಾಗಿದ್ದ ಸಂದೇಹಕ್ಕೆ ತೆರೆ ಎಳೆದಿರುವ ಸಮ್ಮಿಶ್ರ ಸರ್ಕಾರ ಬರುವ ಡಿಸೆಂಬರ್ 3ರಿಂದ 13 ರವರೆಗೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನ ಕೈಗೊಂಡಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ದೋಸ್ತಿ ಪಕ್ಷವಾದ ಕಾಂಗ್ರೆಸ್ ನಾಯಕರ ಜತೆ ಈಗಾಗಲೇ ಸಮಾಲೋಚನೆ ನಡೆಸಿದ್ದು, ಬರುವ ಡಿಸೆಂಬರ್ 3 ರಿಂದ 13 ರವರೆಗೆ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುವುದು ಬಹುತೇಕ ನಿಶ್ಚಿತ.
ಬೆಳಗಾವಿಯ ವಿಧಾನಸಭಾ ಅಧಿವೇಶನ ನಡೆಸುವ ಸಂಬಂಧ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಅಧಿಕಾರ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಜತೆಗೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ದ್ವನಿ ಬಲವಾಗಿ ಕೇಳಿ ಬಂದಿತ್ತು. ಪ್ರತ್ಯೇಕತೆಯ ಕೂಗನ್ನು ಮೊಳಕೆಯಲ್ಲಿ ಚಿವುಟಿ ಹಾಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಕರ್ನಾಟಕ ಅಖಂಡವಾಗಿಯೇ ಉಳಿಯುತ್ತದೆ ಎಂದು ಹೇಳಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡುವ ಜತೆಗೆ ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಕೆಲವು ಕಛೇರಿಗಳನ್ನು ಬೆಳಗಾವಿ ಹಾಗೂ ಧಾರವಾಡಗಳಿಗೆ ಸ್ಥಳಾಂತರಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿತ್ತು.
ಈಗ ಬೆಳಗಾವಿಯಲ್ಲೇ ಎಂದಿನಂತೆ ಚಳಿಗಾಲದ ಅಧಿವೇಶನವನ್ನು ನಡೆಸಲು ತೀರ್ಮಾನಿಸುವ ಮೂಲಕ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಇನ್ನಿಲ್ಲದಂತೆ ಮಾಡುವ ಪ್ರಯತ್ನವನ್ನು ಕುಮಾರಸ್ವಾಮಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಹಿಂದೇಟು ಹಾಕಿ ಬೆಂಗಳೂರಿನಲ್ಲೇ ನಡೆಸಲು ಆಸಕ್ತಿ ತೋರಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದಕ್ಕೆಲ್ಲ ಇತಿಶ್ರೀ ಹಾಡಿರುವ ಸಮ್ಮಿಶ್ರ ಸರ್ಕಾರ ಬರುವ ಡಿಸೆಂಬರ್ 3ರಿಂದ 13ರವರೆಗೆ ಒಟ್ಟು 10 ದಿನಗಳ ಕಾಲ ಬೆಳಗಾವಿಯಲ್ಲಿ ವಿಧಾನನಂಡಲದ ಅಧಿವೇಶನ ನಡೆಸುವ ತೀರ್ಮಾನವನ್ನು ಕೈಗೊಂಡಿದೆ.
ಈ ಹಿಂದೆ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗಲೇ ಬೆಳಗಾವಿಯಲ್ಲಿ ಚೊಚ್ಚಲ ವಿಧಾನಸಭಾ ಅಧಿವೇಶನ ನಡೆದಿತ್ತು. ಆನಂತರ ಬಂದ ಎಲ್ಲ ಸರ್ಕಾರಗಳೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದವು. ಅದರಂತೆ ಈ ವರ್ಷವೂ ಡಿ. 3ರಿಂದ 13 ರವರೆಗೂ ಚಳಿಗಾಲದ ಅಧಿವೇಶನ ನಡೆಯಲಿದೆ.

Leave a Comment